
ಮೈಸೂರು,ಮೇ.20: ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ್ ಅವರ ವಿರುದ್ಧ ಮೈಸೂರಿನ ದೇವರಾಜ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಕಾಂಗ್ರೆಸ್ ಮುಖಂಡ ಕೋಟೆಹುಂಡಿ ಮಹದೇವ್ ಅವರು ಕೋಲಾರ ಅಥವಾ ಮೈಸೂರು ಭಾಗದ ಪ್ರಭಾವಿ ರಾಜಕಾರಣಿಯಾಗಿರುವ ಎಚ್. ವಿಶ್ವನಾಥ್ ತಮಗೆ ನೀಡಬೇಕಾಗಿದ್ದ ಸಾಲದ ಹಣವನ್ನು ವಾಪಸ್ ಕೇಳಲು ಹೋದಾಗ ತಮ್ಮ ಮೇಲೆ ಹಲ್ಲೆ ನಡೆಸಿ, ನಿಂದಿಸಿದ್ದಾರೆ ಎಂದು ಆರೋಪಿಸಿ ನೀಡಿದ ದೂರಿನ ಮೇರೆಗೆ ಈ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಕಳೆದ 2013ರಲ್ಲಿ ಎಚ್. ವಿಶ್ವನಾಥ್ ಅವರು ಸಂಸದರಾಗಿದ್ದ ಅವಧಿಯಲ್ಲಿ ಕಾಂಗ್ರೆಸ್ ಮುಖಂಡ ಕೋಟೆಹುಂಡಿ ಮಹದೇವ್ ಅವರ ಬಳಿ 55 ಲಕ್ಷ ರೂಪಾಯಿ ಸಾಲ ಪಡೆದಿದ್ದರು ಎನ್ನಲಾಗಿದೆ. ಅಂದು ಆತ್ಮೀಯ ಸಂಬAಧ ಹೊಂದಿದ್ದ ಕಾರಣಕ್ಕೆ ಮಹದೇವ್ ಅವರು ಈ ಭಾರಿ ಮೊತ್ತದ ಹಣವನ್ನು ಸಾಲವಾಗಿ ನೀಡಿದ್ದರು. ಆದರೆ ವರ್ಷಗಳು ಉರುಳಿದರೂ ವಿಶ್ವನಾಥ್ ಅವರು ಸಾಲದ ಹಣವನ್ನು ಮರುಪಾವತಿ ಮಾಡಿರಲಿಲ್ಲ ಎನ್ನಲಾಗಿದೆ.
ಇತ್ತೀಚೆಗೆ ಕೋಟೆಹುಂಡಿ ಮಹದೇವ್ ಅವರು ತಮಗೆ ಬರಬೇಕಾಗಿದ್ದ 55 ಲಕ್ಷ ರೂಪಾಯಿ ಸಾಲದ ಹಣವನ್ನು ವಾಪಸ್ ಕೇಳಲು ಎಚ್. ವಿಶ್ವನಾಥ್ ಅವರ ಬಳಿ ಹೋಗಿದ್ದರು. ಈ ಸಂದರ್ಭದಲ್ಲಿ ಇಬ್ಬರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ. ಹಣ ನೀಡಲು ನಿರಾಕರಿಸಿದ್ದಲ್ಲದೆ, ವಿಶ್ವನಾಥ್ ಅವರು ತಮ್ಮ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವಬೆದರಿಕೆ ಹಾಕಿದ್ದಾರೆ ಎಂದು ಮಹದೇವ್ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ನೇರವಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗದ ಹಿನ್ನೆಲೆಯಲ್ಲಿ ಮಹದೇವ್ ಅವರು ನ್ಯಾಯಾಲಯದ ಕದ ತಟ್ಟಿದ್ದರು. ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಮೈಸೂರಿನ ಸ್ಥಳೀಯ ನ್ಯಾಯಾಲಯವು, ಆರೋಪದ ಗಾಂಭೀರ್ಯತೆಯನ್ನು ಪರಿಗಣಿಸಿ ಎಚ್. ವಿಶ್ವನಾಥ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಪೊಲೀಸರಿಗೆ ಕಟ್ಟುನಿಟ್ಟಿನ ಆದೇಶ ನೀಡಿದೆ.



.
.
.
.
.
.
.
.
.
.
.
.
.
.
.
.
.
.
.
.
