ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಅವರ ಸಹೋದರ ಚನ್ನರಾಜ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಗೊಂಡ ಘಟನೆ ಸಂಭವಿಸಿದೆ. ಸಂಕ್ರಾಂತಿ ಹಬ್ಬದ ದಿನವಾದ ಇಂದು ಮಂಗಳವಾರ ಬೆಳಗಿನ ಜಾವ ಐದು ಗಂಟೆ ಆಸುಪಾಸಿನ ಸಮಯದಲ್ಲಿ ಈ ಘಟನೆ ನಡೆದಿರುವುದು ತಿಳಿದುಬಂದಿದೆ. ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಬಳಿ ಮರಕ್ಕೆ ಕಾರು ಗುದ್ದಿ ಈ ಅಪಘಾತ ಸಂಭವಿಸಿದೆ.

ಘಟನೆಗೆ ಸಂಬಂಧಿಸಿದಂತೆ ಅವರ ಮಗ ಮೃಣಾಲ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು ಸಚಿವೆ ಮತ್ತು ಅವರೊಂದಿಗೆ ಪ್ರಯಾಣಿಸುತ್ತಿದ್ದ ವಿಧಾನ ಪರಿಷತ್ ಸದಸ್ಯ ಹಾಗೂ ಸಹೋದರನಿಗೆ ಗಂಭೀರಸ್ವರೂಪದ ಗಾಯಗಳೇನೂ ಅಗಿಲ್ಲ, ಸಚಿವೆಯ ಬೆನ್ನುಮೂಳೆಗೆ ಗಾಯವಾಗಿದೆ, ಬೆಳಗಾವಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವರೆಂದು ಹೇಳಿದರು. ನಿನ್ನೆ ಬೆಂಗಳೂರಲ್ಲಿ ಕೆಪಿಸಿಸಿ ಸರ್ವ ಸದಸ್ಯರ ಸಭೆ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಂಡ ಸಚಿವೆ ತಮ್ಮ ಕ್ಷೇತ್ರಕ್ಕೆ ವಾಪಸ್ಸಾಗುತ್ತಿದ್ದಾಗ ಅಪಘಾತ ಜರುಗಿದೆ.