ಅಹಮದಾಬಾದ್: ಗುಜರಾತ್ನ ಅಹಮದಾಬಾದ್ನಲ್ಲಿ ನಡೆದ ಏರ್ಇಂಡಿಯಾ ವಿಮಾನ ದುರಂತ ಇಡೀ ಜಗತ್ತನ್ನು ಬೆಚ್ಚಿಬೀಳಿಸಿದೆ. ಏರ್ಇಂಡಿಯಾ ವಿಮಾನದಲ್ಲಿದ್ದ ಎರಡು ಬ್ಲ್ಯಾಕ್ಸ್ಬಾಕ್ಸ್ಗಳ ಪೈಕಿ ಎರಡನೇ ಬ್ಲ್ಯಾಕ್ಬಾಕ್ಸ್ ಕೂಡ ಸಿಕ್ಕಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ವಿಮಾನದ ಫ್ಲೈಟ್ ಡೇಟಾ ರೆಕಾರ್ಡರ್ ಶುಕ್ರವಾರ ಪತ್ತೆಯಾಗಿತ್ತು. ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ ಭಾನುವಾರ ಪತ್ತೆಯಾಗಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ಹಿರಿಯ ಸಹಾಯಕ ಪಿ.ಕೆ. ಮಿಶ್ರಾ ಮಾಹಿತಿ ನೀಡಿದ್ದಾರೆ.
2ನೇ ಬ್ಲ್ಯಾಕ್ ಬಾಕ್ಟ್ ಪ್ರಕರಣದ ತನಿಖೆಗೆ ನಿರ್ಣಾಯಕವಾಗಿದ್ದು, ಇದು ದುರಂತ ಸಂದರ್ಭದಲ್ಲಿ ಪ್ರತಿ ಸೆಕೆಂಡ್‌ನಲ್ಲಿ ಏನಾಯ್ತು ಎಂಬುದನ್ನ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ಕಾಕ್‌ಪಿಟ್ ಮತ್ತು ವಿಮಾನ ವ್ಯವಸ್ಥೆಯಲ್ಲಿ ಏನಾಯ್ತು ಎಂಬುದರ ಕುರಿತು ವಸ್ತುನಿಷ್ಠ ಮಾಹಿತಿಯನ್ನು ನೀಡುತ್ತದೆ. ಎಲ್ಲಾ ಕಾಕ್‌ಪಿಟ್ ಆಡಿಯೋ, ಪೈಲಟ್ ಸಂಭಾಷಣೆಗಳು, ರೇಡಿಯೋ ಪ್ರಸರಣಗಳು ಹಾಗೂ ಇತರೇ ಯಾಂತ್ರಿಕ ಶಬ್ಧಗಳ ಮಾಹಿತಿಯನ್ನು ಸಂಗ್ರಹಿಸಿರುತ್ತದೆ.
ಫ್ಲೈಟ್ ಡೇಟಾ ರೆಕಾರ್ಡರ್ (FDR) ಮತ್ತು ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ (CVR) ಎಂದು ಕರೆಯಲ್ಪಡುವ ಕಪ್ಪು ಪೆಟ್ಟಿಗೆಯು ವಿಮಾನದ ಹಾರಾಟ ಮತ್ತು ಕಾಕ್‌ಪಿಟ್ ಸಂಭಾಷಣೆಗಳಿಗೆ ಸಂಬಂಧಿಸಿದ ಡೇಟಾವನ್ನು ದಾಖಲಿಸುತ್ತದೆ. ಅಪಘಾತದ ಕಾರಣಗಳನ್ನು ತನಿಖೆ ಮಾಡುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ಇದನ್ನು ಕಪ್ಪು ಪೆಟ್ಟಿಗೆ ಎಂದು ಕರೆಯಲಾಗುತ್ತದೆ, ಆದರೆ ಇದು ಕಿತ್ತಳೆ ಬಣ್ಣದಲ್ಲಿರುತ್ತದೆ. ಈ ಬಣ್ಣವು ಅವಶೇಷಗಳಲ್ಲಿ ಸುಲಭವಾಗಿ ಗುರುತಿಸಲು ಸಹಾಯ ಮಾಡುತ್ತದೆ.
ಲಂಡನ್‌ಗೆ ತೆರಳುತ್ತಿದ್ದ ವಿಮಾನವು ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ ಕೆಲವೇ ಕ್ಷಣಗಳಲ್ಲಿ ಮೇಘನಿನಗರ ಪ್ರದೇಶದ ವೈದ್ಯಕೀಯ ಕಾಲೇಜಿನ ಹತ್ತಿರದ ಕ್ಯಾಂಪಸ್‌ಗೆ ಅಪ್ಪಳಿಸಿ ಬೆಂಕಿ ಹೊತ್ತಿಕೊಂಡಿತ್ತು. ಬೋಯಿಂಗ್ 787-8 (AI 171) ವಿಮಾನದಲ್ಲಿದ್ದ 242 ಪ್ರಯಾಣಿಕರು ಮತ್ತು ಸಿಬ್ಬಂದಿಗಳಲ್ಲಿ ಒಬ್ಬರು ಮಾತ್ರ ಬದುಕುಳಿದಿದ್ದಾರೆ. ಎಂಬಿಬಿಎಸ್ ವಿದ್ಯಾರ್ಥಿಗಳು ಸೇರಿ 29 ಮಂದಿ ಸಾವನ್ನಪ್ಪಿದ್ದಾರೆ.ಈ ಅಪಘಾತದಲ್ಲಿ ಬದುಕುಳಿದ ಏಕೈಕ ವ್ಯಕ್ತಿ ರಮೇಶ್ ವಿಶ್ವಾಸ್ ಅವರನ್ನು ಪ್ರಧಾನಿ ಮೋದಿ ಭೇಟಿ ಮಾಡಿ ಅವರ ಆರೋಗ್ಯ ವಿಚಾರಿಸಿದರು.