

ಕಾರ್ಕಳ,ನ.06:ಕಾರ್ಕಳ ತಾಲೂಕು ಮಹಿಳಾ ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕಾಗಿ ಮಹಿಳಾಮಣಿಗಳ ಹಗ್ಗಜಗ್ಗಾಟ ಕೊನೆಗೂ ತಾರ್ಕಿಕ ಅಂತ್ಯ ಕಂಡಿದೆ. ನ.06ರಂದು ಶುಕ್ರವಾರ ಕಾರ್ಕಳ ತಾಲೂಕು ಸಾಂತ್ವನ ಕೇಂದ್ರದಲ್ಲಿ ಕಾರ್ಕಳ ತಾಲೂಕು ಮಹಿಳಾ ಒಕ್ಕೂಟದ ಮಹಾಸಭೆ ನಡೆಯಿತು. ಈ ಸಭೆಯಲ್ಲಿ ಪ್ರಸ್ತುತ ಅಧ್ಯಕ್ಷರ ಗೈರುಹಾಜರಿಯಲ್ಲಿ ನೂತನ ಅಧ್ಯಕ್ಷರು ಹಾಗೂ ಇತರೇ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಲಾಗಿದೆ.
ಒಕ್ಕೂಟದ ನೂತನ ಅಧ್ಯಕ್ಷರಾಗಿ ಕಾಂತಿ ಶೆಟ್ಟಿ, ಕಾರ್ಯದರ್ಶಿಯಾಗಿ ಪ್ರಭಾ ಕಿಶೋರ್ ಹಾಗೂ ಕೋಶಾಧಿಕಾರಿಯಾಗಿ ಅರುಂಧತಿ ಆಚಾರ್ಯ ಆಯ್ಕೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಏನಿದು ವಿವಾದ?
ಕಾರ್ಕಳ ತಾಲೂಕು ಮಹಿಳಾ ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕಾಗಿ ನಡೆಯುತ್ತಿರುವ ಜಟಾಪಟಿ ಇಂದು ನಿನ್ನೆಯದಲ್ಲ.ಮಹಿಳಾ ಸಾಂತ್ವನ ಕೇಂದ್ರದ ವತಿಯಿಂದ ನಿರ್ಮಾಣಗೊಂಡ ಶಿಶು ಪಾಲನಾ ನೂತನ ಕಟ್ಟಡದ ಉದ್ಘಾಟನೆಯ ಬಳಿಕ ಅಧ್ಯಕ್ಷ ಸ್ಥಾನಕ್ಕಾಗಿ ಮಹಿಳಾ ಮಣಿಗಳ ಕಿತ್ತಾಟ ಜೋರಾಗಿತ್ತು. ಯಶೋಧಾ ಶೆಟ್ಟಿ ಕಳೆದ 10 ವರ್ಷಗಳಿಂದ ನಿರಂತರವಾಗಿ ಅಧ್ಯಕ್ಷರಾಗಿ ಮುಂದುವರಿದಿದ್ದು ನೂತನ ಕಟ್ಟಡ ನಿರ್ಮಾಣದ ಬಳಿಕ ಅಧ್ಯಕ್ಷ ಸ್ಥಾನ ಬಿಟ್ಟುಕೊಡುವಂತೆ ಮನವಿ ಮಾಡಲಾಗಿತ್ತು, ಆದರೆ ಕಟ್ಟಡ ಉದ್ಘಾಟನೆಯಾಗಿ ಐದಾರು ತಿಂಗಳು ಕಳೆದರೂ ಅವರು ಅಧ್ಯಕ್ಷ ಸ್ಥಾನ ಬಿಟ್ಟು ಕೊಡಲು ನಿರಾಕರಿಸಿದ್ದಾರೆ ಆದ್ದರಿಂದ ಮಹಾಸಭೆಯಲ್ಲಿ ಸರ್ವಾನುಮತದಿಂದ ಅವರನ್ನು ಬದಲಾಯಿಸಿ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದೆ ಎಂದು ನೂತನ ಅಧ್ಯಕ್ಷೆ ಕಾಂತಿ ಶೆಟ್ಟಿ ತಿಳಿಸಿದ್ದಾರೆ.
ಕಳೆದ ಅಕ್ಟೋಬರ್ 24 ರಂದು ಒಕ್ಕೂಟದ ಅಧ್ಯಕ್ಷರಾಗಿದ್ದ ಯಶೋಧ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಮಹಾಸಭೆ ನಡೆದು ಬಳಿಕ ಕೋರಂ ಇಲ್ಲದೇ ಮುಂದೂಡಲಾಗಿತ್ತು ಎಂದು ಕಾಂತಿ ಶೆಟ್ಟಿ ಹೇಳಿದ್ದಾರೆ. ಆದರೆ ಈ ಸಭೆಯಲ್ಲಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದರೂ ಬಳಿಕ ಎರಡು ಬಣಗಳ ನಡುವಿನ ವಾಗ್ವಾದದಿಂದ ಸಭೆಯೇ ರದ್ದಾಗಿತ್ತು ಎನ್ನುವ ಮಾಹಿತಿ ತಿಳಿದುಬಂದಿದೆ. ಬಳಿಕ ನ.06 ರಂದು ಮತ್ತೆ ಮಹಾಸಭೆ ನಡೆದಿದ್ದು , ಈ ಸಭೆಗೆ ಈವರೆಗೆ ಅಧ್ಯಕ್ಷರಾಗಿದ್ದ ಯಶೋಧ ಶೆಟ್ಟಿ ಸೇರಿ ಹಲವು ಮಹಿಳಾ ಸದಸ್ಯರು ಗೈರು ಹಾಜರಾದ ಕಾರಣದಿಂದ ಅವರ ಅನುಪಸ್ಥಿತಿಯಲ್ಲಿ ಮಹಾ ಸಭೆಯಲ್ಲಿ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಈ ಸಭೆಯಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯ ನಡಾವಳಿಯನ್ನು ಜಿಲ್ಲಾ ಸಂಘ ಸಂಸ್ಥೆಗಳ ನೋಂದಣಿ ಕಚೇರಿಯ ಅನುಮೋದನೆಗೆ ಕಳುಹಿಸಲಾಗುವುದು ಎಂದು ನೂತನ ಅಧ್ಯಕ್ಷೆ ಕಾಂತಿ ಶೆಟ್ಟಿ ಹೇಳಿದ್ದಾರೆ.
ಇತ್ತ ಯಶೋಧ ಶೆಟ್ಟಿಯವರು ನಾನು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ ಎಂದಿದ್ದು, ಈ ಬೆಳವಣಿಗೆ ಸಾಕಷ್ಟು ಕುತೂಹಲಕ್ಕೆ ಎಡೆಮಾಡಿದೆ.





.
.
.
.
.
.
.
.
.
.
.
.
.
.
.
.
.
.
.
.
