ಮಂಗಳೂರು : ಮಂಗಳೂರಿನಲ್ಲಿ ಕೋಟಿ ರೂ ಮೌಲ್ಯದ ಐಷಾರಾಮಿ ಕಾರಿಗೆ ಲಕ್ಷಾಂತರ ರೂ ಮೌಲ್ಯದ ನೋಂದಣಿಯ ದಾಖಲೆಯನ್ನು ಸೃಷ್ಟಿಸಿ ಸರ್ಕಾರಕ್ಕೆ ಭಾರಿ ತೆರಿಗೆಸ ವಂಚಿಸಿರುವ ಸಾರಿಗೆ ಇಲಾಖೆಯ ತೆರಿಗೆ ವಂಚನೆ ದಂಧೆ ಬೆಳಕಿಗೆ ಬಂದಿದೆ.
ಐಶಾರಾಮಿ ಕಾರುಗಳ ತಪಾಸಣೆ ವೇಳೆ ಈ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಾಗಿದ್ದು,ಸದ್ಯ ಕಾರು ಸೀಜ್ ಮಾಡಿ ಆರ್ಸಿ ಬ್ಲಾಕ್ ಲಿಸ್ಟ್ಗೆ ಸೇರಿಸಲಾಗಿದೆ. ಶಿವಮೊಗ್ಗ ವಿಭಾಗದ ಸಾರಿಗೆ ಇಲಾಖೆ ಜಂಟಿ ಆಯುಕ್ತರಿಂದ ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.
2017ರಲ್ಲಿ ಮಂಗಳೂರಿನ ನಿಹಾಲ್ ಅಹ್ಮದ್ ಎಂಬುವವರು ಬೆಂಗಳೂರಿನಲ್ಲಿ 2.50 ಕೋಟಿ ಮೌಲ್ಯದ ಮರ್ಸಿಡಿಸ್-ಬೆಂಜ್ ಎಎಂಜಿ ಜಿ 63 (Mercedes-Benz AMG G 63) ಕಾರು ಖರೀದಿಸಿದ್ದರು. ಅದನ್ನು ತಾತ್ಕಾಲಿಕವಾಗಿ ನೋಂದಣಿ ಮಾಡಿ ಬಳಿಕ 2025ರಲ್ಲಿ ಮಂಗಳೂರಿನ ನೀರಜ್ ಕುಮಾರ್ ಶರ್ಮಾ ಎಂಬುವವರ ಹೆಸರಿನಲ್ಲಿ ಕಾರು ನೋಂದಾಣಿ ಮಾಡಿಸಲಾಗಿದೆ.ಕಾರು ನೋಂದಣಿಗೂ ಮುನ್ನವೇ ಮಂಗಳೂರು ಸಾರಿಗೆ ಅಧಿಕಾರಿ ಶ್ರೀಧರ್ ಮಲ್ಲಾಡ್ ಕಾರಿನ ದಾಖಲೆ ಮಾರ್ಪಾಡು ಮಾಡಿದ್ದಾರೆ. ಆ ಮೂಲಕ ಲಕ್ಷಾಂತರ ರೂ. ತೆರಿಗೆ ವಂಚಿಸಲು ಮುಂದಾಗಿದ್ದಾರೆ. 2025ರ ಜನವರಿಯಲ್ಲೇ ದಾಖಲೆ ಬದಲಿಸಲಾಗಿದೆ. WDB4632722X261301 ಚಾಸಿಸ್ ನಂಬರ್ನ Benz AMG G 63 ಕಾರಿಗೆ ಅದೇ ಚಾಸಿಸ್ ನಂಬರ್ನಲ್ಲಿ Benz GLA 200 CDA ಕಾರಿನ ನಕಲಿ ದಾಖಲೆ ಸೃಷ್ಟಿ ಮಾಡಲಾಗಿದೆ. 15798460107755 ಇಂಜಿನ್ ನಂಬರ್ ಸರಿಯಾಗಿದ್ದರೂ ಕಾರಿನ ಮಾಡೆಲ್ ಮಾರ್ಪಡಿಸಲಾಗಿದೆ. ಮಂಗಳೂರು ಆರ್ಟಿಓದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಉಡುಪಿ ಆರ್ಟಿಓದಲ್ಲಿ ಕಾರು ನೋಂದಾಣಿ ಮಾಡಲಾಗಿದೆ. ಸದ್ಯ ಮೈಸೂರಿನಲ್ಲಿ ತಪಾಸಣೆ ವೇಳೆ ಕಾರಿನ ನಕಲಿ ದಾಖಲೆ ಮಾಹಿತಿ ಬಹಿರಂಗವಾಗಿದೆ.