ಜಾಗತಿಕ ಮಟ್ಟದಲ್ಲಿ ಚಿನ್ನದ ಬೆಲೆ ದಿನೇದಿನೇ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಬಡ ಮಧ್ಯಮ ವರ್ಗದವರಿಗೆ ಚಿನ್ನ ಗಗನಕುಸುಮವಾಗಿ ಪರಿಣಮಿಸಿದೆ. ಕಳೆದ ಸುಮಾರು 5-6 ವರ್ಷಗಳಿಂದ ಚಿನ್ನದ ಬೆಲೆ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಇಂದು 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ ಬರೋಬ್ಬರಿ 1,29,430 ಹಾಗೂ 22 ಕ್ಯಾರೆಟ್ ಚಿನ್ನದ ದರ 1,18,650 ರೂ ತಲುಪಿದೆ.
ಜಾಗತಿಕ ಚಿನಿವಾರ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ಏರಿಕೆ ಇಳಿಕೆಗಳು ಅಮೇರಿಕಾದ ಆರ್ಥಿಕ ನೀತಿಗಳ ಮೇಲೆ ಅವಲಂಬಿತವಾಗಿದ್ದು, ಇದರ ನೇರ ಹೊಡೆತ ಭಾರತದ ಚಿನ್ನದ ಮಾರುಕಟ್ಟೆಗೂ ತಟ್ಟುತ್ತದೆ.ಅಮೆರಿಕದ ಫೆಡರಲ್ ರಿಸರ್ವ್ ಸಭೆಯ ನಿರ್ಧಾರಗಳು ಮತ್ತು ದುರ್ಬಲ ಆರ್ಥಿಕ ವರದಿಗಳ ಹಿನ್ನಲೆಯಲ್ಲಿ ಸಧ್ಯ ಗೂಳಿಯಂತೆ ಮುನ್ನುಗ್ಗುತ್ತಿರುವ ಚಿನ್ನದ ದರದಲ್ಲಿ ಇಳಿಕೆಯಾಗುವ ಸಾಧ್ಯತೆಗಳು ಇರುವ ಹಿನ್ನಲೆಯಲ್ಲಿ ಚಿನ್ನ ಖರೀದಿಸುವವರು ಹಾಗೂ ಹೂಡಿಕೆದಾರರು ಸಧ್ಯ ಚಿನ್ನ ಖರೀದಿ ಮುಂಡೂಡುವುದು ಒಳಿತು ಎಂದು ಮಾರುಕಟ್ಟೆ ತಜ್ಞರು ಸಲಹೆ ನೀಡಿದ್ದಾರೆ.
10 ಗ್ರಾಂ ಚಿನ್ನದ ಬೆಲೆ 77,000 ಕ್ಕೆ ಇಳಿಕೆ?: ಹೂಡಿಕೆದಾರರಿಗೆ ತಜ್ಞರಿಂದ ಪ್ರಮುಖ ಎಚ್ಚರಿಕೆ
ಪ್ರಸ್ತುತ ಚಿನ್ನದ ಬೆಲೆಗಳು ಗಗನಕ್ಕೇರಿದ್ದು, ಸಾಮಾನ್ಯ ಮಧ್ಯಮ ವರ್ಗ ಮತ್ತು ಹೂಡಿಕೆದಾರರಲ್ಲಿ ಕಳವಳವನ್ನುಂಟುಮಾಡುತ್ತಿವೆ. ಈ ಪರಿಸ್ಥಿತಿಯ ನಡುವೆಯೂ ಚಿನ್ನದ ಬೆಲೆಯಲ್ಲಿ ಗಮನಾರ್ಹ ಕುಸಿತ ಸಂಭವಿಸಬಹುದು ಎಂದು ಮಾರುಕಟ್ಟೆ ತಜ್ಞರು ವರದಿ ಮಾಡಿದ್ದಾರೆ. ಪೇಸ್ 360 ರ ಸಹ-ಸಂಸ್ಥಾಪಕ ಮತ್ತು ಮುಖ್ಯ ಜಾಗತಿಕ ಹೂಡಿಕೆ ತಂತ್ರಜ್ಞ ಅಮಿತ್ ಗೋಯೆಲ್ ಅವರ ಪ್ರಕಾರ, ಚಿನ್ನದ ಬೆಲೆಗಳು ಶೀಘ್ರದಲ್ಲೇ ತೀವ್ರವಾಗಿ ಇಳಿಯಬಹುದು ಎಂದು ಹೂಡಿಕೆದಾರರಿಗೆ ಎಚ್ಚರಿಕೆ ನೀಡಿದ್ದಾರೆ.
ಚಿನ್ನದ ಬೆಲೆಯಲ್ಲಿ ಭಾರೀ ಬೆಲೆ ಏರಿಕೆ ಇತಿಹಾಸದಲ್ಲಿ ಅಪರೂಪ ಎಂದಿರುವ ಅಮಿತ್ ಗೋಯೆಲ್, ಕಳೆದ 40 ವರ್ಷಗಳಲ್ಲಿ, ಚಿನ್ನ ಮತ್ತು ಬೆಳ್ಳಿ ಬೆಲೆಗಳು ಕೇವಲ ಎರಡು ಬಾರಿ ಮಾತ್ರ ತೀವ್ರವಾಗಿ ಏರಿವೆ ಮತ್ತು ಎರಡೂ ಸಂದರ್ಭಗಳಲ್ಲಿ, ಡಾಲರ್ ಸೂಚ್ಯಂಕ ದುರ್ಬಲವಾಗಿತ್ತು. ಪರಿಣಾಮವಾಗಿ, ಎರಡೂ ಸಂದರ್ಭಗಳಲ್ಲಿ ಬೆಲೆ ಏರಿಕೆಯ ನಂತರ, ಅದು ಮತ್ತೆ ವೇಗವಾಗಿ ಕುಸಿಯಿತು. ಚಿನ್ನದ ಬೆಲೆ ‘ಬುಲ್ ರನ್’ ಅಂತ್ಯವನ್ನು ಸೂಚಿಸುವ ಮಟ್ಟವನ್ನು ತಲುಪುತ್ತದೆ ಎಂದು ವಿಶ್ಲೇಷಿಸಿದ್ದಾರೆ. ಬೆಲೆ ಈ ಹಂತವನ್ನು ತಲುಪಿದ ತಕ್ಷಣ, ಹೂಡಿಕೆದಾರರು ತಮ್ಮ ಚಿನ್ನವನ್ನು ಮಾರಾಟ ಮಾಡಲು ಪ್ರಾರಂಭಿಸುತ್ತಾರೆ ಇದು ತ್ವರಿತ ಬೆಲೆ ಕುಸಿತಕ್ಕೆ ಕಾರಣವಾಗುತ್ತದೆ ಎಂದು ಗೋಯೆಲ್ ಅಭಿಪ್ರಾಯಪಟ್ಟಿದ್ದಾರೆ.
ಚಿನ್ನದ ಬೆಲೆ ಎಷ್ಟು ಕಡಿಮೆಯಾಗಬಹುದು?
ಮಾರುಕಟ್ಟೆ ತಜ್ಞರ ಮುನ್ಸೂಚನೆಗಳ ಪ್ರಕಾರ, ಚಿನ್ನದ ಬೆಲೆಗಳು ಸುಮಾರು 30 ರಿಂದ 35 ಪ್ರತಿಶತದಷ್ಟು ಕಡಿಮೆಯಾಗಬಹುದು. ಈ ವಿಶ್ಲೇಷಣೆ ನಿಜವೆಂದು ಸಾಬೀತಾದರೆ, 10 ಗ್ರಾಂ ಚಿನ್ನದ ಬೆಲೆ ಸುಮಾರು 77,700 ಕ್ಕೆ ಇಳಿಯಬಹುದು. ಬೆಳ್ಳಿಗೆ ಕುಸಿತದ ಅಪಾಯ ಇನ್ನೂ ಹೆಚ್ಚಾಗಿದೆ. ಬೆಳ್ಳಿ ಬೆಲೆಗಳು ಶೇಕಡಾ 50 ರಷ್ಟು ಕಡಿಮೆಯಾಗಬಹುದು, ಅಂದರೆ ಒಂದು ಕಿಲೋಗ್ರಾಂ ಬೆಳ್ಳಿಯ ಬೆಲೆ ಸುಮಾರು 77,450 ಆಗಿರಬಹುದು ಎಂದು ಅಂದಾಜಿಸಲಾಗಿದೆ.