
ಶ್ರೀಹರಿಕೋಟ, ಡಿ. 24: ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ(ISRO) ಬ್ಲೂಬರ್ಡ್ ಬ್ಲಾಕ್-2 ಬಾಹುಬಲಿ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಭಾರತದ ಮೊದಲ ವಾಣಿಜ್ಯ ಉಪಗ್ರಹ ಉಡಾವಣೆ ಇದಾಗಿದ್ದು, ಮೂರು ಹಂತಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಕಕ್ಷೆಗೆ ಸೇರಿಸಲಾಯಿತು.
ಬ್ಲೂಬರ್ಡ್ ಬ್ಲಾಕ್-2 ಸುಮಾರು 6100 ಕಿಲೋಗ್ರಾಂಗಳಷ್ಟು ತೂಗುತ್ತದೆ. ಇದು ಇಸ್ರೋ LVM3 ಬಳಸಿ ಲೋ ಅರ್ಥ್ ಆರ್ಬಿಟ್ (LEO) ಗೆ ಕಳುಹಿಸಿದ ಅತಿ ಭಾರವಾದ ಪೇಲೋಡ್ ಆಗಿದೆ. ಇಸ್ರೋದ ವಾಣಿಜ್ಯ ವಿಭಾಗವಾದ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ (NSIL) ಸುಗಮಗೊಳಿಸಿದ ವಾಣಿಜ್ಯ ಒಪ್ಪಂದದ ಅಡಿಯಲ್ಲಿ ಉಡಾವಣೆಯನ್ನು ಕೈಗೊಳ್ಳಲಾಗುತ್ತಿದೆ. ಈ ಮೊದಲು ಶ್ರೀಹರಿಕೋಟಾದಿಂದ ಬೆಳಿಗ್ಗೆ 8.54 ಕ್ಕೆ ಉಡಾವಣೆ ಮಾಡಲು ನಿರ್ಧರಿಸಲಾಗಿತ್ತು ಬಳಿಕ 8 ಗಂಟೆ 55 ನಿಮಿಷ 30 ಸೆಕೆಂಡ್ಗೆ ಉಡಾವಣೆ ಮಾಡಲಾಗಿದೆ. ಇಸ್ರೋ ಅಭಿವೃದ್ಧಿಪಡಿಸಿರುವ ಎಲ್ವಿಎಂ3 ಮೂರು-ಹಂತದ ವಿನ್ಯಾಸವನ್ನು ಹೊಂದಿದೆ. ಸುಮಾರು 15 ನಿಮಿಷಗಳ ಹಾರಾಟದ ನಂತರ ರಾಕೆಟ್ನಿಂದ ಬ್ಲೂಬರ್ಡ್ ಬ್ಲಾಕ್-2 ಬೇರ್ಪಟ್ಟು ಸುಮಾರು 520 ಕಿ.ಮೀ .ಎತ್ತರದಲ್ಲಿ ಅದರ ಉದ್ದೇಶಿತ ಕಕ್ಷೆಯನ್ನು ಯಶಸ್ವಿಯಾಗಿ ತಲುಪಿತು.
ಇಸ್ರೋದ ವಾಣಿಜ್ಯ ವಿಭಾಗವಾದ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ (NSIL) ಮತ್ತು ಅಮೆರಿಕ ಮೂಲದ AST ಸ್ಪೇಸ್ಮೊಬೈಲ್ ಮಧ್ಯೆ ನಡೆದ ವಾಣಿಜ್ಯ ಒಪ್ಪಂದದ ಭಾಗವಾಗಿ ಉಪಗ್ರಹವನ್ನು ಉಡಾವಣೆ ಮಾಡಲಾಗಿತ್ತು. 43.5 ಮೀಟರ್ ಎತ್ತರ ಮತ್ತು 640 ಟನ್ ತೂಕವಿರುವ LVM3 ರಾಕೆಟ್ ಅನ್ನು ಬಾಹುಬಲಿ ಎಂದು ಕರೆಯಲಾಗುತ್ತದೆ.
ಮಸ್ಕ್ನ ಸ್ಟಾರ್ ಲಿಂಕ್ ಅಥವಾ ಒನ್ವೆಬ್ ಸೇರಿದಂತೆ ಹಲವು ಕಂಪನಿಗಳು ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆಯನ್ನು ನೀಡುತ್ತಿವೆ. ಆದರೆ ಇಲ್ಲಿ ಫೋನಿಗೆ ನೇರವಾಗಿ ಉಪಗ್ರಹದ ಸಂಪರ್ಕ ಇಲ್ಲ.ಮನೆಯಲ್ಲಿರುವ ಆಂಟೇನಾಗೆ ಉಪಗ್ರಹದ ಮೂಲಕ ಸಿಗ್ನಲ್ ತಲುಪಿ ನಂತರ ವೈಫೈ ಮೂಲಕ ಫೋನಿಗೆ ಇಂಟರ್ನೆಟ್ ಸೌಲಭ್ಯ ಪಡೆಯಬಹುದು.

.
.
