
ಕಾರ್ಕಳ,ಜ.01 : ನಿಟ್ಟೆ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ, ಮಂಗಳೂರು ಕೆ.ಎಸ್. ಹೆಗ್ಡೆ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ, ಕಾರ್ಕಳ ತಾಲೂಕಿನ ನಿಟ್ಟೆ ವಿನಯ ಹೆಗ್ಡೆ (86) ಜ. 1ರಂದು ಗುರುವಾರ ಮುಂಜಾನೆ ಮಂಗಳೂರಿನ ನಿವಾಸದಲ್ಲಿ ನಿಧನರಾದರು.
ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ನಿಟ್ಟೆಯ ಕೆ.ಎಸ್. ಹೆಗ್ಡೆಯವರ ಪುತ್ರರಾದ ವಿನಯ ಹೆಗ್ಡೆಯವರು ತಮ್ಮ ಹುಟ್ಟೂರು ನಿಟ್ಟೆಯಲ್ಲಿ ಸಮೂಹ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ, ನಿಟ್ಟೆ ಡೀಮ್ಡ್ ವಿಶ್ವವಿದ್ಯಾಲಯದ ಮೂಲಕ ನಿಟ್ಟೆಯನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದಾರೆ. ಇದಲ್ಲದೇ ವೈದ್ಯಕೀಯ ಕ್ಷೇತ್ರದಲ್ಲಿ ಕೂಡ ವಿನಯ ಹೆಗ್ಡೆಯವರು ಮಹಾನ್ ಸಾಧನೆ ಮಾಡಿದ್ದಾರೆ.
ಪದವಿ ಶಿಕ್ಷಣ ಮುಗಿಸಿದ ಬಳಿಕ ಮಂಗಳೂರಿನಲ್ಲಿ ಉದ್ಯೋಗ ಸೇರಿ ತದನಂತರ1975ರಲ್ಲಿ ಹುಟ್ಟೂರು ನಿಟ್ಟೆಯಲ್ಲಿ ಲೆಮಿನಾ ಫೌಂಡ್ರೀಸ್ ಹೆಸರಲ್ಲಿ ವಾಹನಗಳ ಚಕ್ರಗಳ ಡ್ರಮ್ ತಯಾರಿಕಾ ಸಂಸ್ಥೆ ಸ್ಥಾಪಿಸಿದ್ದರು. ಇದಾದ ಬಳಿಕ 1979ರಲ್ಲಿ ಶಿಕ್ಷಣ ಸಂಸ್ಥೆ ಆರಂಭಿಸುವ ತಾಯಿಯ ಕನಸನ್ನು ಈಡೇರಿಸುವ ಸಲುವಾಗಿ ತಂದೆ ಕೆ.ಎಸ್ ಹೆಗ್ಡೆಯವರ ಸಲಹೆ ಪಡೆದು ನಿಟ್ಟೆ ಎಜ್ಯುಕೇಶನ್ ಟ್ರಸ್ಟ್ ಸ್ಥಾಪಿಸಿ ನಿಟ್ಟೆಯಲ್ಲಿ ಶಿಕ್ಷಣ ಸಂಸ್ಥೆ ಆರಂಭಿಸಿದ್ದರು.ಇದಾದ ಬಳಿಕ ಮಂಗಳೂರಿನ ದೇರಳಕಟ್ಟೆಯಲ್ಲಿ ಕೆ.ಎಸ್ ಹೆಗ್ಡೆ ಚಾರಿಟಬಲ್ ಆಸ್ಪತ್ರೆಯನ್ನು ಕಟ್ಟಿ ಬಡವರಿಗೆ ರಿಯಾಯಿತಿ ದರದಲ್ಲಿ ವೈದ್ಯಕೀಯ ಸೇವೆ ನೀಡುವ ಕೆಲಸ ಮಾಡಿದ್ದಾರೆ. ಇವರ ಶಿಕ್ಷಣ ಕ್ರಾಂತಿಯ ಫಲವಾಗಿ ರಾಜ್ಯದಾದ್ಯಂತ ಇಂದು ಸುಮಾರು 44 ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡುವ ಜೊತೆಗೆ ನಿಟ್ಟೆ ಹೆಸರನ್ನು ವಿಶ್ವವಿಖ್ಯಾತರಾಗಿಸಿದ್ದಾರೆ.
ವಿನಯ ಹೆಗ್ಡೆಯವರು ಪತ್ನಿ ಸುಜಾತ, ಪುತ್ರ ವಿಶಾಲ್ ಹೆಗ್ಡೆ, ಪುತ್ರಿ ಅಶ್ವಿತಾ , ಸಹೋದರರಾದ ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ, ಪ್ರಸನ್ನ ಹೆಗ್ಡೆ ಸೇರಿದಂತೆ ಅಪಾರ ಬಂಧುವರ್ಗವನ್ನು ಅಗಲಿದ್ದಾರೆ.


.
.
