
ಕಾರ್ಕಳ,ಜ.01: ಕಾರ್ಕಳ ತಾಲೂಕಿನ ಸಾಣೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಪುಲ್ಕೇರಿ ಬೈಪಾಸ್ ಸರ್ಕಲ್ ನಿಂದ ಮಂಗಳೂರಿನ ಬಿಕರ್ನಕಟ್ಟೆಯವರೆಗೆ ಕಳೆದ 4 ವರ್ಷಗಳಿಂದ ರಾ.ಹೆ. 169 ಚತುಷ್ಪಥ ಹೆದ್ದಾರಿ ಕಾಮಗಾರಿ ನಿರಂತರವಾಗಿ ನಡೆಯುತ್ತಿದೆ. ರಸ್ತೆ ಅಗಲೀಕರಣದ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ಇಲಾಖೆ ಈ ಹಿಂದೆ ವಿನೂತನ ಟಾರ್ಪಾಲ್ ತಂತ್ರಜ್ಞಾನವನ್ನು ಹೆದ್ದಾರಿ ನಿರ್ಮಾಣ ಕಾರ್ಯದಲ್ಲಿ ಪರಿಚಯಿಸಿತ್ತು.
ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣದ ಸಂದರ್ಭ ಗುಡ್ಡಗಳನ್ನು ಕಡಿದು ರಸ್ತೆ ನಿರ್ಮಾಣ ಕಾರ್ಯ ಮಾಡಲಾಗುತ್ತಿತ್ತು. ಆ ಸಂದರ್ಭದಲ್ಲಿ ಗುಡ್ಡದ ಮಣ್ಣು ಜರಿದು ರಸ್ತೆಗೆ ಬೀಳುತ್ತಿದ್ದ ವೇಳೆ ಸುರಕ್ಷತೆಯ ದೃಷ್ಟಿಯಿಂದ ಗುಡ್ಡಜರಿದ ಭಾಗಕ್ಕೆ ಕಾಂಕ್ರೀಟ್ ತಡೆಗೋಡೆ ನಿರ್ಮಾಣ ಮಾಡಬೇಕೆಂದು ಸಾರ್ವಜನಿಕರ ನಿರಂತರ ಒತ್ತಡಕ್ಕೆ ಮಣಿದು ಮಳೆಗಾಲದಲ್ಲಿ ಗುಡ್ಡ ಜರಿಯುತ್ತಿರುವ ಭಾಗಕ್ಕೆ ಭಾರೀ ಗಾತ್ರದ ಟಾರ್ಪಾಲನ್ನು ಅಳವಡಿಸಿ ಹೆದ್ದಾರಿ ಇಲಾಖೆ ವಿನೂತನ ತಂತ್ರಜ್ಞಾನವನ್ನು ಪರಿಚಯಿಸಿತ್ತು. ಆದರೆ ವಿಪರೀತ ಗಾಳಿ ಮಳೆಗೆ ಟಾರ್ಪಾಲು ಹರಿದು ಹೆದ್ದಾರಿ ಇಲಾಖೆಯ ತಂತ್ರಜ್ಞಾನವನ್ನು ಅಣಕಿಸುವಂತಹ ಸನ್ನಿವೇಶ ನಿರ್ಮಾಣವಾಗಿತ್ತು. ಆ ಬಳಿಕ ಸಾರ್ವಜನಿಕರ ಒತ್ತಡಕ್ಕೆ ಮಣಿದು ಸುಭದ್ರವಾದ ತಡೆಗೋಡೆಯನ್ನು ನಿರ್ಮಾಣ ಮಾಡಿದ್ದರು.ಇದೀಗ ಮತ್ತೊಂದು ವಿನೂತನ ತಂತ್ರಜ್ಞಾನವನ್ನು ಹೊಸ ಬಸ್ಸು ನಿಲ್ದಾಣದ ನಿರ್ಮಾಣ ಕಾರ್ಯದಲ್ಲಿ ಪರಿಚಯಿಸಿದೆ.
ಹೆದ್ದಾರಿ ಕಾಮಗಾರಿ ಸಂದರ್ಭದಲ್ಲಿ ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ 6 ಬಸ್ಸು ತಂಗುದಾಣಗಳನ್ನು ಕೆಡವಲಾಗಿದ್ದು, ಸಾರ್ವಜನಿಕರ ನಿರಂತರ ಒತ್ತಾಯದ ಬಳಿಕ ಗ್ರಾಮದ 4 ಕಡೆಗಳಲ್ಲಿ ಹೊಸ ಬಸ್ಸು ತಂಗುದಾಣದ ನಿರ್ಮಿಸಲು ಮುಂದಾಗಿದೆ.
ಶಿಲೆಕಲ್ಲುಗಳಿಂದ ಅಥವಾ ಕಾಂಕ್ರೀಟ್ ಪಿಲ್ಲರ್ ಗಳಿಂದ ತಳಪಾಯ ನಿರ್ಮಾಣ ಮಾಡುವುದು ಸಾಮಾನ್ಯ. ಆದರೆ ಹೆದ್ದಾರಿ ಇಲಾಖೆ ಸಿಮೆಂಟ್ ಕಾಂಕ್ರೀಟ್ ಬ್ಲಾಕ್ ಗಳಿಂದ ತಳಪಾಯ ನಿರ್ಮಾಣ ಮಾಡಿ ಹೊಸ ತಂತ್ರಜ್ಞಾನವನ್ನು ಪರಿಚಯಿಸಿದೆ ಎಂದು ಸಾಣೂರು ನರಸಿಂಹ ಕಾಮತ್ ತಿಳಿಸಿದ್ದಾರೆ.


.
.
