
ಕಾರ್ಕಳ, ಮಾ.05: ರಾಜ್ಯದ ಕಾಂಗ್ರೆಸ್ ಸರ್ಕಾರವು ಕರಾವಳಿ ಭಾಗದ ಮೇಲೆ ಸವಾರಿ ಮಾಡುತ್ತಿದ್ದು, ಮರಳು ಮತ್ತು ಕೆಂಪುಕಲ್ಲು, ಮಣ್ಣು ಸಾಗಾಟದಂತಹ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸದೇ ಈ ಭಾಗದ ಬಡ ಕಾರ್ಮಿಕರ ಮತ್ತು ಉದ್ಯಮಿಗಳ ಬದುಕನ್ನು ಬೀದಿಗೆ ತಳ್ಳಿದೆ ಎಂದು ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಹೇಳಿದರು.
ಅವರು ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯರ ಸಭೆ ಉದ್ದೇಶಿಸಿ ಮಾತನಾಡಿ, ಕರಾವಳಿಯ ಜೀವನಾಡಿಯಾಗಿರುವ ಮರಳುಗಾರಿಕೆ ಮತ್ತು ಕೆಂಪುಕಲ್ಲು ಸಾಗಾಟದ ಸಮಸ್ಯೆಯಿಂದಾಗಿ ಇಂದು ಸಾವಿರಾರು ಲಾರಿ ಮಾಲೀಕರು, ಚಾಲಕರು, ಕೂಲಿ ಕಾರ್ಮಿಕರು ಮತ್ತು ಹೋಟೆಲ್ ಉದ್ಯಮಿಗಳು ಸಂಕಷ್ಟದಲ್ಲಿದ್ದಾರೆ.ಜನರು ಎದುರಿಸುತ್ತಿರುವ ಮೂಲಭೂತ ಸಮಸ್ಯೆಗಳ ಸ್ಪಂದಿಸದೇ ಕೇವಲ ತಮ್ಮ ಸರ್ಕಾರದ ಪೊಳ್ಳು ಗ್ಯಾರಂಟಿ ಯೋಜನೆಗಳ ಬಗ್ಗೆ ಸಿಎಂ ಗುಣಗಾನ ಮಾಡುತ್ತಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲದೇ ಸರ್ಕಾರ ದಿವಾಳಿಯಾಗಿದೆ.ಕರಾವಳಿಯ ಸಂಪನ್ಮೂಲಗಳನ್ನು ಹತ್ತಿಕ್ಕುವ ಮೂಲಕ ಜನರನ್ನು ಆರ್ಥಿಕವಾಗಿ ಹೈರಾಣಾಗಿಸುತ್ತಿದೆ ಎಂದು ಸುನಿಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಇದು ಸಿದ್ದರಾಮಯ್ಯ ಸರ್ಕಾರದ ಕರಾವಳಿ ಕೊಡುಗೆಯೋ ಅಥವಾ ದ್ವೇಷದ ಸಾಧನೆಯೋ? ಎಂದು ಪ್ರಶ್ನಿಸಿದ ಅವರು ಮುಂದಿನ ಅಧಿವೇಶನದಲ್ಲಿ ಸದನದೊಳಗೆ ಕರಾವಳಿಯ ಎಲ್ಲಾ ಶಾಸಕರು ಅವಿಭಜಿತ ಜಿಲ್ಲೆಗೆ ಆದ ಅನ್ಯಾಯದ ವಿರುದ್ಧ ಪ್ರತಿಭಟಿಸಲಿದ್ದೇವೆ ಎಂದು ಹೇಳಿದರು.
ಕರಾವಳಿಯ ಉಡುಪಿ,ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಬಿಜೆಪಿ ಶಾಸಕರೇ ಇದ್ದಾರೆ ಎಂದು ಸರ್ಕಾರದ ಮಲತಾಯಿ ಧೋರಣೆಯನ್ನು ಸ್ವತ: ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವೆ ಸಿಎಂ ಭಾಗವಹಿಸಿದ್ದ ವೇದಿಕೆಯಲ್ಲಿ ಸಮರ್ಥಿಸಿಕೊಂಡಿದ್ದಾರೆ. ಬಿಜೆಪಿ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಿಗೆ ಅನುದಾನ ನೀಡಬಾರದು ಎಂಬ ದ್ವೇಷದ ರಾಜಕಾರಣದಿಂದಾಗಿ ಕಾರ್ಕಳ ಸೇರಿದಂತೆ ಕರಾವಳಿಯ ಅಭಿವೃದ್ಧಿ ಕುಂಠಿತಗೊAಡಿದೆ ಎಂದು ಅವರು ದೂರಿದರು. ಸಾಂಪ್ರಾದಾಯಿಕ ಕಲೆಯಾದ ಕಂಬಳ,ಯಕ್ಷಗಾನ ಇತ್ಯಾದಿಗಳಿಗೆ ಸರಕಾರ ಅಡ್ಡಿಪಡಿಸಿದೆ ಎಂದು ಹೇಳಿದರು. ಸಿಎಂ ಸಿದ್ದರಾಮಯ್ಯ ಅವರು, ಕರಾವಳಿಯ ಯಾವುದೇ ಹೊಸ ಯೋಜನೆಗೆ ಚಾಲನೆ ನೀಡುತಿಲ್ಲ. ಅಂಬೇಡ್ಕರ್ ಭವನದಂತಹ ದಲಿತ ಪರ ಕೆಲಸಗಳಿಗೂ ಅನುದಾನ ನೀಡದೆ ಬರಿಗೈಲಿ ವಾಪಸ್ಸಾಗಿದ್ದಾರೆ. ಮಹಾಮಸ್ತಕಾಭಿಷೇಕದಂತಹ ಪವಿತ್ರ ಕಾರ್ಯಕ್ರಮಕ್ಕೂ ಕೇವಲ ಬಾಯಿಮಾತಿನ ಸಹಕಾರ ನೀಡಿರುವುದು ಈ ಭಾಗದ ಸಾಂಸ್ಕೃತಿಕ ಪರಂಪರೆಗೆ ಮಾಡಿದ ಅವಮಾನವಾಗಿದೆ ಎಂದರು.
ವೇದಿಕೆಯಲ್ಲಿ ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್, ಜಿಲ್ಲಾ ಉಪಾಧ್ಯಕ್ಷರಾದ ಮಹಾವೀರ ಹೆಗ್ಡೆ, ರಾಜ್ಯ ಯುವಮೋರ್ಚಾ ಕಾರ್ಯದರ್ಶಿ ವಿಖ್ಯಾತ್ ಶೆಟ್ಟಿ, ಕಾರ್ಕಳ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಸತೀಶ್ ಪೂಜಾರಿ, ಸುರೇಶ್ ಶೆಟ್ಟಿ, ಪ್ರಮುಖರಾದ ಜಯರಾಮ ಸಾಲ್ಯಾನ್, ರವೀಂದ್ರ ಮಡಿವಾಳ, ಸುಧಾಕರ್ ಹೆಗ್ಡೆ ಹೆಬ್ರಿ ಮತ್ತು ಕ್ಷೇತ್ರದ ಗ್ರಾಮ ಪಂಚಾಯತು ಸದಸ್ಯರು, ಮುಖಂಡರು ಉಪಸ್ಥಿತರಿದ್ದರು.


.
.
.
.
.
.
.
.
.
.
