
ಬೆಂಗಳೂರು,ಏ,10: 2025-26ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಶಿಕ್ಷಣ ಸಚಿವ ಮಧು ಬಂಗಾರಪ್ಪಅವರು ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದ್ದಾರೆ.
ಒಟ್ಟು 6,32,200 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 5,46,698 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಪೈಕಿ 2,32,928 ( 83.65%) ಬಾಲಕರು, 3,13,770 (88.70%) ಬಾಲಕಿಯರು ಉತ್ತೀರ್ಣರಾಗಿದ್ದು, ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಇನ್ನು ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಮೊದಲ ಬಾರಿಗೆ ಶೇ.86.48 ಫಲಿತಾಂಶ ಬಂದಿದೆ. ಇದು ಐತಿಹಾಸಿಕ ದಿನ ಎಂದು ಸಚಿವ ಮಧು ಬಂಗಾರಪ್ಪ ಹರ್ಷ ವ್ಯಕ್ತಪಡಿಸಿದ್ದಾರೆ.
ಕಲಾ ವಿಭಾಗದಲ್ಲಿ 98,310 (72.86%) ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗದಲ್ಲಿ 1,82,317(88.04%) ವಿದ್ಯಾರ್ಥಿಗಳು ಹಾಗೂ ವಿಜ್ಞಾನ ವಿಭಾಗದಲ್ಲಿ 2,66,071( 86.48%) ಉತ್ತೀರ್ಣರಾಗಿದ್ದಾರೆ. ಈ ಪೈಕಿ ನಗರ ವಿಭಾಗದಲ್ಲಿ 3,71,853 (85.95%) ಮಕ್ಕಳು, ಗ್ರಾಮೀಣ ವಿಭಾಗದ 1,74,845 (87.62%) ಮಕ್ಕಳು ಉತ್ತೀರ್ಣರಾಗಿದ್ದಾರೆ. ಉನ್ನತ ಶ್ರೇಣಿಯಲ್ಲಿ 1,70,529 ಮಕ್ಕಳು, ಪ್ರಥಮ ದರ್ಜೆಯಲ್ಲಿ 2,95,385 ಮಕ್ಕಳು, ದ್ವೀತಿಯ ದರ್ಜೆಯಲ್ಲಿ 63,957 ಮಕ್ಕಳು ಉತ್ತೀರ್ಣರಾಗಿದ್ದು, 16,827 ಮಕ್ಕಳು ಜಸ್ಟ್ ಪಾಸ್ ಆಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಪರೀಕ್ಷೆ 1ರಲ್ಲಿ ಅನುತ್ತೀರ್ಣರಾದವರು ಯಾವುದೇ ಬೇಸರ ಮಾಡಿಕೊಳ್ಳದೆ ಧೈರ್ಯವಾಗಿ ಫೇಲ್ ಆದ ವಿಷಯಗಳ ಪರೀಕ್ಷೆಯನ್ನು ಮತ್ತೊಮ್ಮೆ ಬರೆಯಲು ಅವಕಾಶ ಇದೆ. ದ್ವಿತೀಯ ಪಿಯುಸಿ ಎರಡನೇ ಪರೀಕ್ಷೆ ಏಪ್ರಿಲ್ 30ರಿಂದ ಆರಂಭವಾಗಿ ಮೇ 13ರವರೆಗೆ ನಡೆಯಲಿದೆ. ಈ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ತಮ್ಮ ಫಲಿತಾಂಶವನ್ನು ಸುಧಾರಿಸಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ. ಆದರೆ ಈ ಬಾರಿ ಮೂರನೇ ಪರೀಕ್ಷೆ ನಡೆಸುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಮರುಮೌಲ್ಯಮಾಪನ-ಮರುಎಣಿಕೆಗೆ ಅರ್ಜಿ:
ಫಲಿತಾಂಶದ ಬಗ್ಗೆ ಅನುಮಾನ ಇರುವ ವಿದ್ಯಾರ್ಥಿಗಳಿಗೆ ಮರುಮೌಲ್ಯಮಾಪನ ಮತ್ತು ಮರುಎಣಿಕೆಗಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಇದರಿಗಾಗಿ ಏಪ್ರಿಲ್ 13ರಿಂದ ಏಪ್ರಿಲ್ 19ರವರೆಗೆ ಸಮಯ ನಿಗದಿಪಡಿಸಲಾಗಿದೆ. ಮರುಮೌಲ್ಯಮಾಪನಕ್ಕೆ ಪ್ರತಿ ವಿಷಯಕ್ಕೆ 1670 ರೂ. ಶುಲ್ಕ ವಿಧಿಸಲಾಗಿದ್ದು, ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಮತ್ತೊಮ್ಮೆ ಪರಿಶೀಲಿಸಿಕೊಳ್ಳಬಹುದು ಎಂದು ಸಚಿವರು ತಿಳಿಸಿದ್ದಾರೆ.
















.
.
.
.
.
.
.
.
.
.
