
ಬೆಂಗಳೂರು, ಏ.30: ಸಿಎಂ ಬದಲಾವಣೆಯ ಕೂಗು ಜೋರಾಗಿದ್ದು, ಡಿಸಿಎಂ ಡಿಕೆ ಶಿವಕುಮಾರ್ ಬಣ ಡಿಕೆಶಿಗೆ ಸಿಎಂ ಪಟ್ಟ ಕಟ್ಟಲು ಹರಸಾಹಸಪಡುತ್ತಿರುವ ಬೆನ್ನಲ್ಲೇ ಇದೀಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶಾಕ್ ನೀಡಿದ್ದು,ಸಿಎಂ ಬದಲಾವಣೆ ಕುರಿತು ನಡೆಯುತ್ತಿರುವ ಊಹಾಪೋಹಗಳ ಕುರಿತು ಮಹತ್ವದ ಹೇಳಿಕೆ ನೀಡಿದ್ದಾರೆ. ಸದ್ಯಕ್ಕೆ ರಾಜ್ಯದಲ್ಲಿ ಸಿಎಂ ಬದಲಾಯಿಸುವ ಯಾವುದೇ ಯೋಚನೆ ಹೈಕಮಾಂಡ್ ಮುಂದಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ಈ ಸಮಸ್ಯೆಯನ್ನು ಶೀಘ್ರದಲ್ಲೇ ಬಗೆಹರಿಸಲಾಗುವುದು ಎಂಬ ಸುಳಿವು ನೀಡಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು 2025ರ ನವೆಂಬರ್ 20 ರಂದು ತನ್ನ ಐದು ವರ್ಷಗಳ ಅಧಿಕಾರಾವಧಿಯ ಎರಡೂವರೆ ವರ್ಷ ಪೂರ್ಣಗೊಳಿಸಿದಾಗಿನಿಂದಲೂ ಅಧಿಕಾರದ ಹಂಚಿಕೆ ಕುರಿತು ಚರ್ಚೆಗಳು ತೀವ್ರಗೊಂಡಿವೆ. ಕಾಂಗ್ರೆಸ್ ಸರ್ಕಾರವು 2023ರಲ್ಲಿ ಅಧಿಕಾರಕ್ಕೆ ಬಂದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವೆ ಅಧಿಕಾರ ಹಂಚಿಕೆ ಕುರಿತು ಒಪ್ಪಂದವಾಗಿತ್ತು ಎಂಬ ವಾದವನ್ನು ಮುಂದಿಟ್ಟುಕೊAಡು, ಡಿ.ಕೆ. ಶಿವಕುಮಾರ್ ಅವರ ಬೆಂಬಲಿಗರು ಸಿಎಂ ಹುದ್ದೆ ನೀಡಬೇಕೆಂದು ಬಿಗಿಪಟ್ಟು ಹಿಡಿದಿದ್ದಾರೆ.
ಗೃಹ ಸಚಿವ ಜಿ. ಪರಮೇಶ್ವರ್ ಅವರು ಖರ್ಗೆಯವರೇ ಮುಖ್ಯಮಂತ್ರಿಯಾಗಬಹುದು ಎಂದು ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿರುವ ಖರ್ಗೆ, ಸೋನಿಯಾ ಗಾಂಧಿ ಅವರು ತೆಗೆದುಕೊಳ್ಳುವ ನಿರ್ಧಾರವೇ ತಮಗೆ ಅಂತಿಮ, ಸದ್ಯಕ್ಕೆ ಮುಖ್ಯಮಂತ್ರಿ ಹುದ್ದೆಯ ಬದಲಾವಣೆ ಕುರಿತು ಯಾವುದೇ ಪ್ರಶ್ನೆ ಉದ್ಭವಿಸುವುದಿಲ್ಲ ಮತ್ತು ರಾಜ್ಯದಲ್ಲಿ ಈಗಾಗಲೇ ಒಬ್ಬ ಮುಖ್ಯಮಂತ್ರಿ ಇದ್ದಾರೆ ಎಂದಿದ್ದಾರೆ. ಒಂದು ವೇಳೆ ಯಾವುದೇ ಬದಲಾವಣೆ ಮಾಡಲು ನಿರ್ಧರಿಸಿದರೆ ಅದಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಮೇ 4 ರಂದು ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಚುನಾವಣೆಗಳು ಹಾಗೂ ಕರ್ನಾಟಕದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶಗಳು ಪ್ರಕಟವಾಗಲಿದ್ದು, ಈ ಫಲಿತಾಂಶದ ಬಳಿಕ ಕಾಂಗ್ರೆಸ್ ಪಕ್ಷದಲ್ಲಿ ಸಂಭಾವ್ಯ ನಾಯಕತ್ವ ಬದಲಾವಣೆ ಹಾಗೂ ಸಚಿವ ಸಂಪುಟ ಪುನಾರಚನೆಯ ಚರ್ಚೆಗಳು ತೀವ್ರಗೊಳ್ಳುವ ಸಾಧ್ಯತೆ ದಟ್ಟವಾಗಿದೆ.


.
.
.
.
.
.
.
.
.
.
.
.
.
.
.
.
.
.
.
.
