
ತುಮಕೂರು,ಮೇ.18 : ದೇಶದಲ್ಲಿ ಇಂದು ಗ್ಯಾಸ್, ಪೆಟ್ರೋಲ್, ಡೀಸೆಲ್ ದರ ಗಗನಕ್ಕೇರಿದ್ದು,ಇದರಿಂದಾಗಿ ಬಡವರ ಜೀವನ ದುಸ್ತರವಾಗಿದೆ,ಇದಕ್ಕೆ ಪ್ರಧಾನಿ ನರೇಂದ್ರ ಮೋದಿಯವರೇ ಕಾರಣ ಎಂದು ಸಿಎಂ ಸಿದ್ಧರಾಮಯ್ಯ ಹೇಳಿದರು.
ಅವರು ತುಮಕೂರಿನಲ್ಲಿ ಮಂಗಳವಾರ ಕಾಂಗ್ರೆಸ್ ಆಡಳಿತಕ್ಕೆ ಬಂದು ಮೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸರ್ಕಾರ ಸಾಧನಾ ಸಮಾವೇಶದಲ್ಲಿ ಮಾತನಾಡಿ, ತಾರತಮ್ಯ ಮಾಡದೇ ಎಲ್ಲಾ ವರ್ಗದವರಿಗೂ ನಾವು ಗ್ಯಾರೆಂಟಿ ಜಾರಿ ಮಾಡಿದ್ದೇವೆ. ಎಲ್ಲಾ ಬಡವರಿಗೂ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಶಕ್ತಿ ತುಂಬವ ಕೆಲಸ ಮಾಡಿದ್ದೇವೆ. ಬಿಜೆಪಿಯವರು ಸಮಾಜದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಾರೆ. ಬಿಜೆಪಿಯವರ ರೀತಿ ನಾವು ಬೆಂಕಿ ಹಚ್ಚುವ ಕೆಲಸ ಮಾಡಲ್ಲ. ಹಿಂದೂ ಮುಸ್ಲಿಂ ಗಲಾಟೆ ಮಾಡಿ ಬೇರೆ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಮೋದಿ ಅವರು 12 ವರ್ಷ ಗುಜರಾತಿನ ಸಿಎಂ ಆಗಿದ್ದರು. ಆದರೆ ಗುಜರಾತ್ ನಲ್ಲಿ ಯಾವುದೇ ಅಭಿವೃದ್ಧಿ ಮಾಡಲಿಲ್ಲ ಎಂದು ವಾಗ್ದಾಳಿ ನಡೆಸಿದರು.
ಇವತ್ತು ಪೆಟ್ರೋಲ್ ಡೀಸೆಲ್ ಬೆಲೆಯನ್ನು ಹೆಚ್ಚಿಸಲಾಗಿದೆ. ಗ್ಯಾಸ್ ಸಿಲಿಂಡರ್ ಬೆಲೆಯನ್ನು ಏರಿಕೆ ಮಾಡಲಾಗಿದೆ. ಮನಮೋಹನ್ ಸಿಂಗ್ ಸರ್ಕಾರದಲ್ಲಿ ಬೆಲೆ ಎಷ್ಟಿತ್ತು? ಈಗ ಸಿಲಿಂಡರ್ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಎಷ್ಟಿದೆ ಇವತ್ತು ದೇಶದಲ್ಲಿ ಬೆಲೆ ಏರಿಕೆಗೆ ನರೇಂದ್ರ ಮೋದಿ ನೇರ ಕಾರಣ ಇದನ್ನು ನಾವು ಅಚ್ಚೆ ದಿನ್ ಎಂದು ಕರೆಯಬೇಕಾ ಎಂದು ಪ್ರಧಾನಿ ಮೋದಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಇತ್ತೀಚಿಗೆ ದೇಶದಲ್ಲಿ ನಡೆದ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಲೀಕ್ ಆಗಿತ್ತು. ಅದಕ್ಕೆ ಕೇಂದ್ರ ಸರ್ಕಾರ ಹಾಗೂ ನರೇಂದ್ರ ಮೋದಿ ಇದರ ಹೊಣೆ ಹೊರಬೇಕು. ದೇಶಾದ್ಯಂತ 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಬರೆದಿದ್ದರು. ವಿವಿಧ ರಾಜ್ಯಗಳಲ್ಲಿ ಅನೇಕ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡರು. ವಿದ್ಯಾರ್ಥಿಗಳ ಆತ್ಮಹತ್ಯೆಗೆ ಕೇಂದ್ರ ಸರ್ಕಾರ ನೇರ ಕಾರಣವಾಗಿದೆ ಎಂದು ಕೇಂದ್ರ ಸರ್ಕಾರ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಮೋದಿ ಸರ್ಕಾರದಲ್ಲಿ ಪ್ರಧಾನಿ ಅಂಬಾನಿಗೆ ಮಾತ್ರ ಲಾಭ 2014ರಲ್ಲಿ ಅದಾನಿ ಅವರ ಒಟ್ಟು ಆದಾಯ 16.50,000 ಕೋಟಿ ಇತ್ತು ಇವತ್ತು ಆದಾಯ 8 ಲಕ್ಷ ಕೋಟಿ ಆಗಿದೆ. ನಾವು ಮತ್ತೆ 2028ರಲ್ಲೂ ಕೂಡ ಅಧಿಕಾರಕ್ಕೆ ಬಂದೇ ಬರುತ್ತೇವೆ. ಈ ರಾಜ್ಯದ ಮುಖ್ಯವಾದ ಅಭಿವೃದ್ಧಿ ಮಾಡುವ ಕೆಲಸ ಮಾಡುತ್ತೇವೆ. 2028 ರಲ್ಲಿ ಕೊಡುವ ಪ್ರಣಾಳಿಕೆ ರಾಜ್ಯದ ಆರ್ಥಿಕ ಸಾಮಾಜಿಕ ಬೆಳವಣಿಗೆಗೆ ಮತ್ತು ಎಲ್ಲಾ ಜನರು ಕೂಡ ಶಕ್ತಿ ಕೊಡಿಸುವಂತಹ ಕೆಲಸ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.



.
.
.
.
.
.
.
.
.
.
.
.
.
.
.
.
.
.
.
.
