
ಕಾರ್ಕಳ, ಜು.09: ಇಂದಿನ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಉದ್ಯೋಗ ಪಡೆಯುವುದು ಸವಾಲಿನ ಸಂಗತಿಯಾಗಿದೆ.ಯುವಕರಲ್ಲಿ ಉದ್ಯೋಗ ಮಾಡಬೇಕು ಎನ್ನುವ ತವಕ ಹಾಗೂ ವಿಶ್ವಾಸ ನಿರ್ಮಾಣವಾಗಬೇಕು ಹಾಗೂ ಕಾರ್ಕಳ ವಿಧಾನಸಭಾ ಕ್ಷೇತ್ರದ ಯುವಕ, ಯುವತಿಯರಿಗೆ ಉದ್ಯೋಗ ಕಲ್ಪಿಸಬೇಕು ಎನ್ನುವ ಉದ್ದೇಶವನ್ನಿಟ್ಟುಕೊಂಡು ವಿಕಾಸ ಸೇವಾ ಸಂಸ್ಥೆ ವತಿಯಿಂದ ಉದ್ಯೋಗ ಸೇತು ನೇರ ಸಂದರ್ಶನವನ್ನು ಆಯೋಜಿಸಲಾಗಿದೆ ಎಂದು ಕಾರ್ಯಕ್ರಮದ ರೂವಾರಿ ಶಾಸಕ ಸುನಿಲ್ ಕುಮಾರ್ ಹೇಳಿದರು.
ಅವರು ಕಾರ್ಕಳ ವಿಕಾಸ ಸೇವಾ ಸಂಸ್ಥೆ ವತಿಯಿಂದ ವಿಕಾಸ ಉದ್ಯೋಗ ಸೇತು ನೇರ ಸಂದರ್ಶನ ಕಾರ್ಯಕ್ರಮದ ಸಮಾರೋಪ ಸಮಾರಂಭದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂದಿನ ಉದ್ಯೋಗ ಮೇಳವು
ಯುವಕರಲ್ಲಿ ಆತ್ಮವಿಶ್ವಾಸ, ಕನಸು ಹುಟ್ಟು ಹಾಕಿದೆ ಮಾತ್ರವಲ್ಲದೇ ಹೊಸ ಭರವಸೆ ಮೂಡಿಸಿದೆ.ಈ ಮೇಳದಲ್ಲಿ 1600 ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ಭಾಗವಹಿಸಿದ್ದು, ಈ ಪೈಕಿ 360 ಅಭ್ಯರ್ಥಿಗಳಿಗೆ ಸ್ಥಳದಲ್ಲೇ ನೇಮಕಾತಿ ಪತ್ರ ವಿತರಿಸಲಾಗಿದೆ, ಹಾಗೂ 240 ಅಭ್ಯರ್ಥಿಗಳ ಹೆಸರನ್ನು ಶಾರ್ಟ್ ಲಿಸ್ಟ್ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಹಂತಹಂತವಾಗಿ ನೇರ ಸಂದರ್ಶನ ನಡೆಸಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಒಟ್ಟಾರೆಯಾಗಿ ಈ ಉದ್ಯೋಗ ಮೇಳದಲ್ಲಿ 1600 ಜನರ ಪೈಕಿ 600 ಅಭ್ಯರ್ಥಿಗಳಿಗೆ ಉದ್ಯೋಗದ ಭರವಸೆ ಸಿಕ್ಕಿದೆ ಎಂದರು.
2015ರಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ ಸುಮಾರು 150 ಕಂಪೆನಿಗಳು ಭಾಗವಹಿಸಿದ್ದು ಸಾಕಷ್ಟು ಯುವ ಜನತೆಗೆ ಉದ್ಯೋಗ ಕಲ್ಪಿಸಲಾಗಿತ್ತು.ಅಂದು ಉದ್ಯೋಗ ಪಡೆದವರು ಮೇಳದ ಯಶಸ್ಸನ್ನು ಇಂದಿಗೂ ಸ್ಮರಿಸುತ್ತಾರೆ ಎಂದರು.
ತಾನು ಇಂಧನ ಸಚಿವನಾಗಿದ್ದ ಇಲಾಖೆಯಲ್ಲಿ 3 ಸಾವಿರ ಜನರಿಗೆ ಉದ್ಯೋಗ ನೀಡಿದ ಪರಿಣಾಮವಾಗಿ ಯುವಕರಲ್ಲಿ ಹೊಸ ಉತ್ಸಾಹ ಮೂಡಿಸಲು ಸಹಕಾರಿಯಾಗಿದೆ.ಮುಂದಿನ ದಿನಗಳಲ್ಲಿ ಹೊಸ ಹೊಸ ಕಂಪೆನಿಗಳಲ್ಲಿ ಉದ್ಯೋಗ ದೊರಕಿಸಲು ಪ್ರಯತ್ನಿಸುವುದಾಗಿ ಶಾಸಕ ಸುನಿಲ್ ಕುಮಾರ್ ಹೇಳಿದರು.
ಉದ್ಯೋಗ ಸೇತು ಹೊಸ ಕನಸು ಭರವಸೆಯನ್ನು ಹುಟ್ಟು ಹಾಕಿದೆ.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಮೋಹನ್ ಆಳ್ವ ಮಾತನಾಡಿ, ಒಬ್ಬ ಜನ ನಾಯಕನಿಗೆ ಇರುವ ಗುಣ ಸುನಿಲ್ ಕುಮಾರ್ ಅವರಿಗಿದೆ. ಕ್ಷೇತ್ರದ ಮಕ್ಕಳ ಭವಿಷ್ಯಕ್ಕೆ ನೆರವಾಗುವ ನಿಟ್ಟಿನಲ್ಲಿ ಉದ್ಯೋಗ ಮೇಳ ಆಯೋಜಿಸಿ ಯಾವ ಜನಪ್ರತಿನಿಧಿಯೂ ಮಾಡದ ಕೆಲಸವನ್ನು ಮಾಡಿದ್ದಾರೆ. ಲಕ್ಷ ಕಂಠ ಗಾಯನ, ವಿದ್ಯುತ್ ಇಲ್ಲದ ಮನೆಗಳಿಗೆ ಬೆಳಕು ಯೋಜನೆಯಡಿ ವಿದ್ಯುತ್ ಸಂಪರ್ಕ ನೀಡಿದ್ದಾರೆ.
ಸುನಿಲ್ ಕುಮಾರ್ ನಾಯಕತ್ವದಲ್ಲಿ ಇನ್ನೂ ಸಾಕಷ್ಟು ಕೆಲಸಕಾರ್ಯಗಳು ಆಗಬೇಕಿದ್ದು ಅವರಿಗೆ ಮುಂದೆಯೂ ಎಲ್ಲರ ಸಹಕಾರ ಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ವಿಜೇಂದ್ರ ಕಿಣಿ, ಶಾಂತಿರಾಜ ಜೈನ್, ಅಂತೋನಿ ಡಿಸೋಜ ನಕ್ರೆ, ಶಶಿಧರ ಕಂಟೇಬೆಟ್ಟು, ವಿನಯ ಬಂಗೇರ, ಮುಂತಾದವರು ಉಪಸ್ಥಿತರಿದ್ದರು.
ರವೀಂದ್ರ ಮಡಿವಾಳ ಸ್ವಾಗತಿಸಿ,ಸುಹಾಸ್ ಶೆಟ್ಟಿ ವಂದಿಸಿದರು.ಕರುಣಾಕರ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.



.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
