Share this news

ಕಾರ್ಕಳ,ನ. 22: ಬಾಹುಬಲಿ ಬೆಟ್ಟದಲ್ಲಿ ವಿರಾಜಮಾನವಾಗಿರುವ ವೈರಾಗ್ಯಮೂರ್ತಿ ಬಾಹುಬಲಿಯ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಈಗಾಗಲೇ ಕ್ಷಣಗಣನೆ ಆರಂಭವಾಗಿದ್ದು, ಮುಂದಿನ 2027ರ ಫೆ.18ರಿಂದ 28ರವರೆಗೆ ನಡೆಯುವ ಮಹಾಮಸ್ತಕಾಭಿಷೇಕ ಮಹೋತ್ಸವದ ಶ್ರೀಮುಖ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ನ.22 ರಂದು ಭಾನುವಾರ ದಾನಶಾಲೆಯಲ್ಲಿರುವ ಮಹಾಮಸ್ತಕಾಭಿಷೇಕ ಮಹೋತ್ಸವದ ಕಾರ್ಯಾಲಯದಲ್ಲಿ ನಡೆಯಿತು.
ಮೂಡುಬಿದಿರೆ ಜೈನ ಮಠದ ಭಾರತಭೂಷಣ ಸ್ವಸ್ತಿಶ್ರೀ ಡಾ. ಚಾರುಕೀರ್ತಿ ಪಂಡಿತಾಚಾರ್ಯವರ್ಯ ಭಟ್ಟಾರಕ ಮಹಾಸ್ವಾಮೀಜಿಯವರು ಶ್ರೀಮುಖ ಪತ್ರಿಕೆ ಬಿಡುಗಡೆಗೊಳಿಸಿದರು. ಕಾರ್ಕಳ ಜೈನ ಮಠದ ಪರಮಪೂಜ್ಯ ರಾಜಗುರು ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ, ಏಲಾಚಾರ್ಯ 108 ಶ್ರೀ ಪ್ರಸಂಗ ಸಾಗರ ಮುನಿಮಹಾರಾಜರ ಪಾವನ ಸಾನಿಧ್ಯದಲ್ಲಿ ಕಾರ್ಯಕ್ರಮ ನಡೆಯಿತು.

ಏಲಾಚಾರ್ಯ ಶ್ರೀ ಪ್ರಸಂಗ ಸಾಗರ ಮುನಿಮಹಾರಾಜರು ಆಶೀರ್ವಚನ ನೀಡಿ, ಬಂಗಾರ ಮೃದುವಾದಾಗ ಆಭರಣವಾಗುತ್ತದೆ, ಮಣ್ಣು ಮೃದುವಾದಾಗ ಮಡಿಕೆಯಾಗುತ್ತದೆ. ಅದೇ ರೀತಿ ಮನುಷ್ಯನಲ್ಲಿನ ಮೃದುತ್ವ, ವಿನಯ ಮತ್ತು ಸೌಮ್ಯ ಗುಣಗಳು ಆತನನ್ನು ಜಿನರ ಪಾವನ ಸಾನಿಧ್ಯದತ್ತ ಕೊಂಡೊಯ್ಯಬಲ್ಲವು. ಬದುಕಿನಲ್ಲಿ ಅಹಂಕಾರವನ್ನು ಬದಿಗಿಟ್ಟು ಮೃದುತ್ವವನ್ನು ಬೆಳೆಸಿಕೊಂಡಾಗ ಧರ್ಮದ ನಿಜವಾದ ಮೌಲ್ಯ ಅರಿವಾಗುತ್ತದೆ ಎಂದರು.

ಮೂಡುಬಿದಿರೆ ಜೈನ ಮಠದ ಸ್ವಾಮೀಜಿ ಆಶೀರ್ವಚನ ನೀಡಿ, ಬಾಹುಬಲಿ ಮಹಾಮಸ್ತಕಾಭಿಷೇಕದ ಹಿಂದೆ ಆದಿನಾಥ ತೀರ್ಥಂಕರರ ಪುತ್ರರಾದ ಭರತ ಮತ್ತು ಬಾಹುಬಲಿಯವರ ಇತಿಹಾಸ ಹಾಗೂ ಅಹಿಂಸೆಯ ಸಂದೇಶವಿದೆ. ದೃಷ್ಟಿಯುದ್ಧ, ಜಲಯುದ್ಧ ಮತ್ತು ಮಲ್ಲಯುದ್ಧಗಳ ಮೂಲಕ ಶಸ್ತ್ರಾಸ್ತ್ರಗಳ ಬಳಕೆಯಿಲ್ಲದೇ ಸಂಘರ್ಷಕ್ಕೆ ಅಂತ್ಯ ಹಾಡಿದ ಬಾಹುಬಲಿಯವರ ಆದರ್ಶ ಜಗತ್ತಿಗೆ ಶಾಂತಿ ಮತ್ತು ಅಹಿಂಸೆಯ ಮಹತ್ವವನ್ನು ಸಾರುತ್ತದೆ. ಕೃಷಿ ಹಾಗೂ ನೀರಾವರಿಗೆ ಅನುಕೂಲವಾಗುವಂತೆ ಆನೆಕೆರೆಯ ನಿರ್ಮಾಣ ಸೇರಿದಂತೆ ಜೈನ ಅರಸರು ಕಾರ್ಕಳದ ಇತಿಹಾಸಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಿದರು. ಕಾರ್ಕಳ ಮತ್ತು ಮೂಡುಬಿದಿರೆ ಜೈನ ಮಠಗಳ ನಡುವಿನ ಅನನ್ಯ ಸಂಬಂಧವನ್ನು ಉಲ್ಲೇಖಿಸಿ, ಹತ್ತು ದಿನಗಳ ಮಹಾಮಸ್ತಕಾಭಿಷೇಕ ಮಹೋತ್ಸವ ಜನರ ಪ್ರೀತಿ, ಶ್ರದ್ಧೆ ಮತ್ತು ಸಹಕಾರದಿಂದ ಯಶಸ್ವಿಯಾಗಲಿ ಎಂದು ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಮಿತಿಯ ಕಾರ್ಯಾಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಮಾತನಾಡಿ,ಬಾಹುಬಲಿ ಮಹಾಮಸ್ತಕಾಭಿಷೇಕದ ಅಂಗವಾಗಿ ಕಾರ್ಕಳ ನಗರದ ರಸ್ತೆ ಅಭಿವೃದ್ಧಿ, ವಿದ್ಯುತ್ ದೀಪಾಲಂಕಾರ ಹಾಗೂ ಗೊಮ್ಮಟ ಬೆಟ್ಟದ ವಿದ್ಯುತ್ ಅಲಂಕಾರಕ್ಕೆ ವಿಶೇಷ ಆದ್ಯತೆ ನೀಡಲಾಗುವುದು.ಈಗಾಗಲೇ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗೆ 10 ಕೋ.ರೂ ಅನುದಾನಕ್ಕೆ ಮನವಿ ಸಲ್ಲಿಸಲಾಗಿದೆ. ಮುಖ್ಯಮಂತ್ರಿ ನಿಧಿಯಿಂದ ರಸ್ತೆ ಅಭಿವೃದ್ಧಿಗೆ ಅನುದಾನ ಪಡೆಯುವ ಪ್ರಯತ್ನ ನಡೆಯಲಿದೆ. ಇದಲ್ಲದೇ ಚತುರ್ಮುಖ ಬಸದಿ ಹಾಗೂ ಬಾಹುಬಲಿ ಬೆಟ್ಟಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಮಾಡಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದರು. ಬಾಹುಬಲಿ ಮಸ್ತಕಾಭಿಷೇಕ ಯಶಸ್ವಿಯಾಗಲು ಸಮಾಜದ ಪ್ರತಿಯೊಬ್ಬರ ಸಹಕಾರ ಮತ್ತು ಪಾಲ್ಗೊಳ್ಳುವಿಕೆ ಅಗತ್ಯವಿದೆ.ಈ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕೈಜೋಡಿಸಿದರೆ ಈ ಮಹಾಮಸ್ತಕಾಭಿಷೇಕ ಎಲ್ಲರ ನೆನಪಿನಲ್ಲಿ ಉಳಿಯುವ ಐತಿಹಾಸಿಕ ಉತ್ಸವವಾಗಲಿದೆ ಎಂದರು.

ಸಮಿತಿಯ ಪ್ರಧಾನ ಕಾರ್ಯದರ್ಶಿ ಪುಷ್ಪರಾಜ್ ಜೈನ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ರತ್ನಾಕರ್ ರಾಜ್ ಅರಸ್, ಎ. ಮೋಹನ್ ಪಡಿವಾಳ್, ಅನಂತರಾಜ್ ಪುವಣಿ ಹಾಗೂ ಡಾ. ಜೀವಂದರ್ ಬಳ್ಳಾಲ್ ಉಪಸ್ಥಿತರಿದ್ದರು.

 

.

 

.

.

.

 

 

 

 

 

 

 

 

 

 

 

 

 

.

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

                                       

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

Leave a Reply

Your email address will not be published. Required fields are marked *