ಕಾರ್ಕಳ, ಜು.17: ಕಂದಾಯ ಇಲಾಖೆಯಲ್ಲಿ ಜನಸ್ನೇಹಿ ಅಧಿಕಾರಿಯಾಗಿ, ತಮ್ಮ ಸರಳತೆ, ಸೌಜನ್ಯ ಮತ್ತು ಸೇವಾ ಮನೋಭಾವದಿಂದ ನೂರಾರು ಜನರ ಹೃದಯ ಗೆದ್ದಿದ್ದ ಕಾರ್ಕಳದ ಕಂದಾಯ ನಿರೀಕ್ಷಕರಾಗಿದ್ದ ಶಿವಪ್ರಸಾದ್ ರಾವ್ ಅವರ ಅಕಾಲಿಕ ನಿಧನಕ್ಕೆ ಕಾರ್ಕಳ ಶಾಸಕ ಸುನಿಲ್ ಕುಮಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಅವರ ನಿಧನದ ಸುದ್ದಿ ತೀವ್ರ ಆಘಾತ ತಂದಿದೆ. ಗ್ರಾಮ ಆಡಳಿತ ಅಧಿಕಾರಿಯಾಗಿ ಹಲವಾರು ಗ್ರಾಮಗಳಲ್ಲಿ ಕರ್ತವ್ಯ ನಿರ್ವಹಿಸಿದ ಅವರು, ಕೇವಲ ಅಧಿಕಾರಿಯಾಗಿರದೇ ಜನರ ನೋವು-ನಲಿವುಗಳಿಗೆ ತಕ್ಷಣ ಸ್ಪಂದಿಸುವ ಆತ್ಮೀಯ ವ್ಯಕ್ತಿಯಾಗಿದ್ದರು. ಕಚೇರಿಗೆ ಬಂದ ಪ್ರತಿಯೊಬ್ಬರನ್ನೂ ಗೌರವದಿಂದ ಮಾತಾಡಿಸಿ, ಸಮಸ್ಯೆಗಳನ್ನು ಮಾನವೀಯ ದೃಷ್ಟಿಯಿಂದ ಆಲಿಸಿ, ಸಾಧ್ಯವಾದಷ್ಟು ಬೇಗ ಪರಿಹಾರ ಕಲ್ಪಿಸುವ ಗುಣವೇ ಅವರನ್ನು ಜನಾನುರಾಗಿ ಅಧಿಕಾರಿಯನ್ನಾಗಿ ರೂಪಿಸಿತ್ತು.
ಕರ್ತವ್ಯನಿಷ್ಠೆ, ಪ್ರಾಮಾಣಿಕತೆ, ಸಮಯಪ್ರಜ್ಞೆ ಮತ್ತು ಜನಪರ ಸೇವೆಯ ಮೂಲಕ ಅವರು ಸಹೋದ್ಯೋಗಿಗಳಿಗೂ ಮಾದರಿಯಾಗಿದ್ದರು. ಅಧಿಕಾರದ ಅಹಂಕಾರವಿಲ್ಲದೇ ವಿನಯದಿಂದ ಎಲ್ಲರೊಂದಿಗೆ ಬೆರೆತು ಬದುಕಿದ ಅವರ ಉತ್ತಮ ವ್ಯಕ್ತಿತ್ವ ಸದಾ ಸ್ಮರಣೀಯ.ಮೂಲತಃ ಕಾರ್ಕಳ ತಾಲೂಕಿನ ನಂದಳಿಕೆ ಗ್ರಾಮದವರಾದ ಶಿವಪ್ರಸಾದ್ ರಾವ್ ಅವರು ತಮ್ಮ ಸೇವೆಯ ಮೂಲಕ ಅನೇಕ ಜನರ ಮನಸ್ಸಿನಲ್ಲಿ ಅಳಿಸಲಾಗದ ಹೆಜ್ಜೆ ಗುರುತು ಮೂಡಿಸಿದ್ದಾರೆ. ಅವರ ಅಗಲಿಕೆ ಕಂದಾಯ ಇಲಾಖೆಗೆ ಮಾತ್ರವಲ್ಲ, ಕಾರ್ಕಳದ ಸಾರ್ವಜನಿಕರಿಗೆ ತುಂಬಲಾರದ ನಷ್ಟವಾಗಿದೆ.
ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ. ಅವರ ಕುಟುಂಬದವರಿಗೆ, ಬಂಧು-ಬಳಗಕ್ಕೆ, ಸಹೋದ್ಯೋಗಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಸುನಿಲ್ ಕುಮಾರ್ ಪ್ರಾರ್ಥಿಸಿ, ಸಂತಾಪ ಸೂಚಿಸಿದ್ದಾರೆ.




.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
