
ಶಿರ್ವ, ಜು.29: ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಸಹಕಾರಿ ಕ್ಷೇತ್ರದ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ವಿಶೇಷವಾಗಿ ಗ್ರಾಮೀಣ ಆರ್ಥಿಕತೆಯನ್ನು ಸದೃಢಗೊಳಿಸುವಲ್ಲಿ ಸಹಕಾರಿ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ಸಹಕಾರ ಭಾರತಿ ರಾಷ್ಟ್ರೀಯ ಸಂಘಟನಾ ಪ್ರಮುಖರಾದ ಶ್ರೀ ಎಸ್.ಆರ್. ಸತೀಶ್ ಚಂದ್ರ ಹೇಳಿದರು.
ಅವರು ಮಂಗಳವಾರ ಶಿರ್ವ ವ್ಯವಸಾಯ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ನಡೆದ ಸಹಕಾರ ಭಾರತಿ ಮೈಸೂರು ವಿಭಾಗದ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಸಹಕಾರಿ ಸಂಸ್ಥೆಗಳು ಹೆಚ್ಚಿನ ವೃತ್ತಿಪರತೆ, ಪಾರದರ್ಶಕತೆ ಹಾಗೂ ತಂತ್ರಜ್ಞಾನದ ಪರಿಣಾಮಕಾರಿ ಬಳಕೆಗೆ ಒತ್ತು ನೀಡಬೇಕಿದ್ದು, ಸದಸ್ಯ ಕೇಂದ್ರಿತ ಸೇವೆಗಳ ಮೂಲಕ ಸಹಕಾರಿ ಚಳವಳಿಯನ್ನು ಮತ್ತಷ್ಟು ಬಲಪಡಿಸಬೇಕೆಂದು ಅವರು ಕರೆ ನೀಡಿದರು. ಸಹಕಾರ ಭಾರತಿ ದೇಶದ ಏಕೈಕ ಸಹಕಾರ ಕ್ಷೇತ್ರದ ಸ್ವಯಂಸೇವಾ ಸಂಘಟನೆಯಾಗಿದ್ದು, ಇನ್ನೆರಡು ವರ್ಷಗಳಲ್ಲಿ ತನ್ನ ಸುವರ್ಣ ಮಹೋತ್ಸವವನ್ನು ಆಚರಿಸಲಿರುವ ಹಿನ್ನೆಲೆಯಲ್ಲಿ ಕಾರ್ಯಕರ್ತರು ತಳಮಟ್ಟದಿಂದ ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಇನ್ನಷ್ಟು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕೆಂದು ತಿಳಿಸಿದರು.
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್ ಮಾತನಾಡಿ, ಪ್ರತಿ ಜಿಲ್ಲೆಯಲ್ಲಿ ನಿಗದಿತ ದಿನಾಂಕದAದು ನಿಯಮಿತ ಜಿಲ್ಲಾ ಕಾರ್ಯಕಾರಿಣಿ ಸಭೆಗಳನ್ನು ನಡೆಸುವ ಜೊತೆಗೆ, ಪ್ರತಿ ತಿಂಗಳು ವಿವಿಧ ತಾಲೂಕುಗಳಲ್ಲಿ ಸಭೆಗಳನ್ನು ಆಯೋಜಿಸುವ ಮೂಲಕ ತಾಲೂಕು ಮಟ್ಟದಲ್ಲಿ ಸಂಘಟನೆಯನ್ನು ಇನ್ನಷ್ಟು ಬಲಪಡಿಸಬೇಕೆಂದು ಜಿಲ್ಲಾ ಪ್ರಮುಖರಿಗೆ ಮಾರ್ಗದರ್ಶನ ನೀಡಿದರು.
ಸಭೆಯಲ್ಲಿ ಮೈಸೂರು ವಿಭಾಗದ ಮೈಸೂರು ನಗರ, ಮೈಸೂರು ಗ್ರಾಮಾಂತರ, ಹಾಸನ, ಮಂಡ್ಯ, ಕೊಡಗು, ದಕ್ಷಿಣ ಕನ್ನಡ, ಮಂಗಳೂರು ಮಹಾನಗರ, ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಪ್ರಮುಖರು ತಮ್ಮ ಜಿಲ್ಲೆಗಳ ಕಾರ್ಯಚಟುವಟಿಕೆಗಳ ವರದಿಯನ್ನು ಮಂಡಿಸಿದರು.
ಸಭೆಯಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಬೃಹತ್ ಹೈನುಗಾರರ ಸಮಾವೇಶ, ಮಂಗಳೂರು ಮಹಾನಗರದಲ್ಲಿ ಕ್ರೆಡಿಟ್ ಸಹಕಾರಿ ಸಮಾವೇಶ ಹಾಗೂ ಚಿಕ್ಕಮಗಳೂರಿನಲ್ಲಿ ಜಿಲ್ಲಾ ಮಟ್ಟದ ಪ್ಯಾಕ್ಸ್ ಸಮಾವೇಶ ಆಯೋಜಿಸಲು ನಿರ್ಧರಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಸಹಕಾರ ಭಾರತಿ ರಾಜ್ಯ ಉಪಾಧ್ಯಕ್ಷ ಸುಬ್ರಹ್ಮಣ್ಯ ಎಡಗೆರೆ ವಹಿಸಿದ್ದರು.
ವೇದಿಕೆಯಲ್ಲಿ ರಾಜ್ಯ ಮಹಿಳಾ ಪ್ರಮುಖ್ ವಿದ್ಯಾಪೈ, ರಾಷ್ಟ್ರೀಯ ಗ್ರಾಹಕ ಭಂಡಾರ ಪ್ರಮುಖ ಭಾರತಿ ಭಟ್, ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾದ ಮಂಜುನಾಥ, ರಾಜ್ಯ ಕಾರ್ಯದರ್ಶಿ ಮಾಧುಸ್ವಾಮಿ, ಸಹಕಾರ ಭಾರತಿ ಕೊಡಗು ಜಿಲ್ಲಾಧ್ಯಕ್ಷ ಅಜಯ್ ಕುಮಾರ್, ರಾಜ್ಯ ಸಂಘಟನಾ ಕಾರ್ಯದರ್ಶಿ ಮಂಜುನಾಥ ಬಿ.ಆರ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ದೇಶದ ಪ್ರತಿಷ್ಠಿತ ಕ್ಯಾಂಪ್ಕೋ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಪ್ರಥಮ ಬಾರಿಗೆ ಸಂಸ್ಥೆಗೆ ಆಗಮಿಸುತ್ತಿರುವ ಶ್ರೀ ಎಸ್ ಆರ್ ಸತೀಶ್ ಚಂದ್ರರವರಿಗೆ ಶಿರ್ವ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಪರವಾಗಿ ಸನ್ಮಾನಿಸಿ, ಗೌರವಿಸಲಾಯಿತು.
ಉಡುಪಿ ಜಿಲ್ಲಾಧ್ಯಕ್ಷ ದಿನೇಶ್ ಹೆಗಡೆ ಆತ್ರಾಡಿ ಸ್ವಾಗತಿಸಿ, ಮೈಸೂರು ವಿಭಾಗ ಪ್ರಮುಖ ಮೋಹನ್ ಕುಂಬಳೇಕರ್ ಕಾರ್ಯಕ್ರಮ ನಿರೂಪಿಸಿದರು. ಶಿರ್ವ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರು ಹಾಗೂ ಸಹಕಾರ ಭಾರತಿ ಉಡುಪಿ ಜಿಲ್ಲಾ ಕೋಶಾಧ್ಯಕ್ಷ ಪ್ರಸಾದ್ ಶೆಟ್ಟಿ ವಂದಿಸಿದರು.
ಸಭೆಯಲ್ಲಿ ಮೈಸೂರು ನಗರ, ಮೈಸೂರು ಗ್ರಾಮಾಂತರ, ಹಾಸನ, ಮಂಡ್ಯ, ಕೊಡಗು, ದಕ್ಷಿಣ ಕನ್ನಡ, ಮಂಗಳೂರು ಮಹಾನಗರ, ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಂದ ಆಗಮಿಸಿದ್ದ ಸುಮಾರು 40 ಮಂದಿ ರಾಷ್ಟ್ರೀಯ, ರಾಜ್ಯಮಟ್ಟದ ಜವಾಬ್ದಾರಿಯುಳ್ಳ ಪ್ರಮುಖರು ಹಾಗೂ ಜಿಲ್ಲಾ ಮಟ್ಟದ ಪದಾಧಿಕಾರಿಗಳು ಭಾಗವಹಿಸಿ ಸಂಘಟನೆಯ ಮುಂದಿನ ಕಾರ್ಯಯೋಜನೆಗಳ ಕುರಿತು ಸಮಗ್ರ ಚರ್ಚೆ ನಡೆಸಿದರು.




.
.
.
.
.
.
.
.
.
.
.
.
.
.
.
.
.
.
.
.
