

ಕಾರ್ಕಳ, ಸೆ.22: ಕಾರ್ಕಳ ತಾಲೂಕು ತಹಶೀಲ್ದಾರ್ ಪ್ರದೀಪ್ ಆರ್ ಅವರ ವಿರುದ್ಧ ಮಹಿಳಾ ಸಿಬ್ಬಂದಿಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಗಂಭೀರ ಆರೋಪ ಕೇಳಿಬಂದಿದೆ. ಕಚೇರಿ ಕರ್ತವ್ಯದ ವೇಳೆ ತಮ್ಮ ಜೊತೆ ತಹಶೀಲ್ದಾರ್ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಮಹಿಳಾ ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಕಚೇರಿ ಕಡತಗಳ ಕುರಿತು ವಿವರಣೆ ಕೇಳಲು ಮಹಿಳಾ ಸಿಬ್ಬಂದಿಗಳನ್ನು ತಹಶೀಲ್ದಾರ್ ಅವರು ತನ್ನ ಕಚೇರಿಗೆ ಕರೆಸಿಕೊಂಡು ಅನುಚಿತವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮಹಿಳಾ ಸಿಬ್ಬಂದಿಗಳು ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೇ ಇಂತಹ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಜರುಗಿಸಿ ಶಿಸ್ತು ಸಮಿತಿ ವಿಚಾರಣೆ ನಡೆಸಿ ಅವರನ್ನು ವರ್ಗಾವಣೆಗೊಳಿಸಬೇಕೆಂದು ನೊಂದ ಮಹಿಳಾ ಸಿಬ್ಬಂದಿಗಳು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಉಲ್ಲೇಖಿಸಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಈ ಕುರಿತು ನೊಂದ ಮಹಿಳಾ ಸಿಬ್ಬಂದಿಗಳು ಹಾಗೂ ಇತರೇ ಅಧಿಕಾರಿಗಳು ಸೋಮವಾರ ಮಧ್ಯಾಹ್ನ ಉಡುಪಿ ಜಿಲ್ಲಾಧಿಕಾರಿ ಸ್ವರೂಪ.ಟಿಕೆ ಯವರ ಕಚೇರಿಗೆ ತೆರಳಿ ನಡೆದ ಘಟನೆಯ ಕುರಿತು ಸವಿವರವಾಗಿ ಮನವಿಯಲ್ಲಿ ಉಲ್ಲೇಖಿಸಿದ್ದಾರೆ. ಆದರೆ ಇಂತಹ ಗಂಭೀರ ಆರೋಪ ಎದುರಿಸುತ್ತಿರುವ ತಹಶೀಲ್ದಾರ್ ಪ್ರದೀಪ್ ಕುಮಾರ್ ಆರ್ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವ ಬದಲು ಜಿಲ್ಲಾಧಿಕಾರಿಗಳು ಈ ಪ್ರಕರಣದ ತನಿಖೆಯನ್ನು ಶಿಸ್ತು ಪಾಲನಾ ಸಮಿತಿಗೆ ಒಪ್ಪಿಸಿದ್ದಾರೆ ಎನ್ನಲಾಗಿದೆ. ಈ ಪ್ರಕರಣದ ಕುರಿತು ಜಿಲ್ಲಾಧಿಕಾರಿಗಳು ಸಂಪರ್ಕಕ್ಕೆ ಸಿಗದ ಹಿನ್ನಲೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ಅವರನ್ನು ಸಂಪರ್ಕಿಸಿದಾಗ, ತಹಶೀಲ್ದಾರ್ ವಿರುದ್ಧ ದೂರು ಬಂದಿದೆ. ಇದರ ತನಿಖೆ ಶಿಸ್ತುಪಾಲನಾ ಸಮಿತಿ ನೀಡಲಾಗಿದೆ. ಲೈಂಗಿಕ ದೌರ್ಜನ್ಯ ಕುರಿತು ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ ಅವರು ಈ ಕುರಿತು ಜಿಲ್ಲಾಧಿಕಾರಿಗಳನ್ನೇ ಕೇಳಿ ಎಂದಿದ್ದಾರೆ.ಜಿಲ್ಲಾಧಿಕಾರಿ ಓರ್ವ ಮಹಿಳೆಯಾಗಿದ್ದರಿಂದ ತಹಶೀಲ್ದಾರ್ ವಿರುದ್ಧ ಕೇಳಿಬಂದಿರುವ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ತಕ್ಷಣವೇ ಎಫ್‌ಐಆರ್ ದಾಖಲಿಸಬೇಕು ಎನ್ನುವ ಆಗ್ರಹ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.
ಕರ್ತವ್ಯದ ಸ್ಥಳದಲ್ಲಿ ಮಹಿಳಾ ಸಿಬ್ಬಂದಿಗಳಿಗೆ ಲೈಂಗಿಕ ಕಿರುಕುಳ ನೀಡಿದರೆ ತಕ್ಷಣವೇ ಅವರ ವಿರುದ್ಧ ಪ್ರಕರಣ ದಾಖಲಾಗಬೇಕು. ಆದರೆ ಓರ್ವ ಜವಾಬ್ದಾರಿಯುತ ಸ್ಥಾನದಲ್ಲಿರುವ ತಹಶೀಲ್ದಾರ್ ಅವರ ಇಂತಹ ಕೆಟ್ಟ ನಡವಳಿಕೆ ತಾಲೂಕು ದಂಡಾಧಿಕಾರಿ ಹುದ್ದೆಯ ಘನತೆಗೆ ಧಕ್ಕೆ ತಂದಿದೆ.
ಈ ಪ್ರಕರಣದ ನಡುವೆಯೇ ತಹಶೀಲ್ದಾರ್ ಪ್ರದೀಪ್ ಅವರು ದಿಢೀರ್ ರಜೆ ಮೇಲೆ ತೆರಳಿದ್ದಾರೆ ಎನ್ನಲಾಗಿದ್ದು, ಅವರ ವಿರುದ್ಧ ಪ್ರಕರಣ ದಾಖಲಾಗುತ್ತದೆಯೇ ಎನ್ನುವುದನ್ನು ಕಾದು ನೋಡಬೇಕಿದೆ.





.
.
.
.
.
.
.
.
.
.
.
.
.
.
.
.
.
.
.
.
