

ಬೆಂಗಳೂರು, ನ.೦೯: ಉಚಿತ ಯೋಜನೆಗಳಿಂದಾಗಿ ಜನರು ದುಡಿಮೆಯತ್ತ ಮುಖಮಾಡದ ಪರಿಣಾಮವಾಗಿ ಉತ್ಪಾದನಾ ವಲಯದಲ್ಲಿ ಅಗತ್ಯ ವಸ್ತುಗಳ ಕೊರೆಯಿಂದಾಗಿ ಬೆಲೆ ಹೆಚ್ಚಾಗುತ್ತದೆ. ಸರ್ಕಾರ ಪ್ರತಿಯೊಂದರ ದರವನ್ನೂ ಏರಿಕೆ ಮಾಡುತ್ತಿದ್ದರೆ ಜನ ಸಾಮಾನ್ಯರು ಜೀವನ ಸಾಗಿಸುವುದಾದರೂ ಹೇಗೆ ಎಂದು ಹೈಕೋರ್ಟ್ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಮೈಸೂರಿನ ಉಗ್ರಾಣವೊಂದರಲ್ಲಿ ಅಕ್ಕಿ ಮತ್ತು ಗೋಧಿ ಕೊರತೆಗೆ ಸಂಬAಧಿಸಿದ ಕ್ರಿಮಿನಲ್ ಪ್ರಕರಣದ ರದ್ದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರಿದ್ದ ಪೀಠವು ರಾಜ್ಯ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಅನ್ನಭಾಗ್ಯ ಯೋಜನೆಯ ೩೨೦ ಕ್ವಿಂಟಲ್ ಅಕ್ಕಿ ಮತ್ತು ೮೫ ಕ್ವಿಂಟಲ್ ಗೋಧಿ ಅಕ್ರಮವಾಗಿ ದಾಸ್ತಾನು ಮಾಡಿದ ಕುರಿತು ಕೆಂಡಾಮAಡಲವಾದ ನ್ಯಾಯಪೀಠ,ಉಗ್ರಾಣದಲ್ಲಿದ್ದ ಧಾನ್ಯಗಳ ಮೂಟೆಗಳನ್ನು ಲೂಟಿ ಮಾಡಿ ಕಾಳಸಂತೆಯಲ್ಲಿ ಮಾರಾಟ ಮಾಡುವುದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ” ಎಂದು ಕಟ್ಟುನಿಟ್ಟಾಗಿ ಹೇಳಿದೆ.
ತುಪ್ಪ, ಅಕ್ಕಿ ದರ ಏರಿಕೆ ಉದಾಹರಣೆ ನೀಡಿ ನ್ಯಾಯಮೂರ್ತಿ ಶ್ರೀಶಾನಂದ “ಕಳೆದ ತಿಂಗಳು ೬೫೦ ರೂಪಾಯಿ ಇದ್ದ ಒಂದು ಕೆ.ಜಿ ತುಪ್ಪದ ಬೆಲೆ ಈಗ ೮೫೦ ರೂಪಾಯಿಗೆ ಏರಿಕೆಯಾಗಿದೆ. ದೀಪಾವಳಿ ಹಬ್ಬಕ್ಕೆ ತುಪ್ಪದ ಯಮದೀಪ ಹಚ್ಚಬೇಕಿತ್ತು, ಆದರೆ ಇಷ್ಟೊಂದು ದರ ಹೆಚ್ಚಾದರೆ ದೀಪ ಹಚ್ಚುವುದು ಹೇಗೆ? ಯಮದೀಪ ಹಚ್ಚುವ ಬದಲು ‘ನನ್ನನ್ನೇ ಕರೆದುಕೊಂಡು ಹೋಗು’ ಎಂದು ಯಮನಲ್ಲಿ ಬೇಡುವ ಪರಿಸ್ಥಿತಿ ಬಂದಿದೆ” ಎಂದು ಮಾರ್ಮಿಕವಾಗಿ ವ್ಯಂಗ್ಯವಾಡಿದರು. ಅಷ್ಟೇ ಅಲ್ಲದೆ, ಪ್ರಸ್ತುತ ಮಾರುಕಟ್ಟೆಯಲ್ಲಿ ಒಂದು ಕೆ.ಜಿ. ಅಕ್ಕಿ ಬೆಲೆ ೧೦೩ ರೂಪಾಯಿಯಾಗಿದೆ ಮತ್ತು ಬಸ್ ಟಿಕೆಟ್ ದರ ಕೂಡ ಹೆಚ್ಚಾಗಿದೆ ಹೀಗಾದರೆ ಜನಸಾಮಾನ್ಯರ ಜೀವನ ಕಷ್ಟವಾಗುತ್ತದೆ ಎಂದರು.
ಇದೇ ವೇಳೆ ಕಬ್ಬಿನ ಬೆಂಬಲ ಬೆಲೆ ವಿಚಾರವನ್ನು ಪ್ರಸ್ತಾಪಿಸಿದ ಪೀಠವು, ಸರ್ಕಾರ ಇದೀಗ ಪ್ರತಿ ಟನ್ ಕಬ್ಬಿಗೆ ೩ ಸಾವಿರ ರೂಪಾಯಿಗೂ ಅಧಿಕ ಬೆಂಬಲ ಬೆಲೆ ಘೋಷಣೆ ಮಾಡಿದೆ. ಆದರೆ, ಈ ಹೆಚ್ಚುವರಿ ಹಣವನ್ನು ಸರ್ಕಾರ ತನ್ನ ಜೇಬಿನಿಂದ ಕೊಡುವುದಿಲ್ಲ, ಬದಲಾಗಿ ಸಾಮಾನ್ಯ ಜನರು ಕಟ್ಟುವ ತೆರಿಗೆ ಹಣದಿಂದಲೇ ನೀಡುತ್ತದೆ. ಇದನ್ನು ಗಮನಿಸುತ್ತಾ ಇರಿ, ದೀಪಾವಳಿ ಹಬ್ಬ ಮುಗಿಯುತ್ತಿದ್ದಂತೆ ಸರ್ಕಾರ ಪ್ರತಿ ಕೆ.ಜಿ. ಸಕ್ಕರೆ ದರವನ್ನು ೯೦ ರೂಪಾಯಿಗೆ ಏರಿಸುವುದು ಖಚಿತ ಎಂದು ಮುನ್ನೆಚ್ಚರಿಕೆಯ ಎಚ್ಚರಿಕೆಯನ್ನು ನೀಡಿತು.
ಅಗತ್ಯ ವಸ್ತುಗಳ ಕೊರತೆ ಕಂಡುಬAದಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಪೀಠ, “ಒಂದೆಡೆ ಉಚಿತವಾಗಿ ನೀಡುವುದಾಗಿ ಹೇಳಿ, ಮತ್ತೊಂದೆಡೆ ಅಗತ್ಯ ವಸ್ತುಗಳ ಬೆಲೆ ಏರಿಸಲಾಗುತ್ತಿದೆ. ದರ ಹೆಚ್ಚಾದ ತಕ್ಷಣ ಹಳೆಯ ಮಾಲಿಗೆ ಹೊಸ ಸೀಲು ಹೊಡೆದು ಹೆಚ್ಚಿನ ದರಕ್ಕೆ ಸರಬರಾಜು ಮಾಡಲಾಗುತ್ತಿದೆ. ಅಗತ್ಯವಸ್ತುಗಳ ಕೊರತೆಯ ನಡುವೆ ಕೃತಕ ಅಭಾವ ಸೃಷ್ಟಿಸಿ ವರ್ತಕರು ಕಾಳಸಂತೆಯಲ್ಲಿ ದುಪ್ಪಟ್ಟು ಬೆಲೆಗೆ ಮಾರಾಟ ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ ಎಂದ ನ್ಯಾಯಪೀಠ, ಉಗ್ರಾಣದ ಹಿರಿಯ ವ್ಯವಸ್ಥಾಪಕರು ತಮ್ಮ ಮೇಲಿನ ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯ ಹೆಚ್ಚಿನ ವಿಚಾರಣೆಯನ್ನು ನ. ೧೧ಕ್ಕೆ ಕಾಯ್ದಿರಿಸಿ ಆದೇಶಿಸಿದೆ.


































.
.
.
.
.
.
.
.
.
.
.
.
.
.
.
.
.
.
.
.
