
ಕಾರ್ಕಳ,ಆ. 1: ಅರಣ್ಯದ ದುರ್ಗಮ ಹಾದಿಗಳಲ್ಲಿ ನಕ್ಸಲರ ಜಾಡು ಹಿಡಿಯುತ್ತ, ಸ್ಫೋಟಕಗಳ ಪತ್ತೆ ನಡೆಸುತ್ತ, ಅನೇಕ ಅಪಾಯಕಾರಿ ಕಾರ್ಯಾಚರಣೆಗಳಲ್ಲಿ ಎಎನ್‌ಎಫ್ ಪಡೆಯ ವಿಶ್ವಾಸಾರ್ಹ ಸಹಯೋಧಳಾಗಿ ಸೇವೆ ಸಲ್ಲಿಸಿದ್ದ ಬೆಲ್ಜಿಯನ್ ಮ್ಯಾಲಿನೋಯಿಸ್ ತಳಿಯ ಹೆಣ್ಣು ಶ್ವಾನ ‘ಅಲ್ಟಿ’ ಎಂಟು ವರ್ಷಗಳ ಅಪ್ರತಿಮ ಸೇವೆಯ ಬಳಿಕ ಜುಲೈ 20ರಂದು ಗೌರವಯುತವಾಗಿ ನಿವೃತ್ತಿಯಾಯಿತು. ಕಾರ್ಕಳದ ಎಎನ್‌ಎಫ್ ಮುಖ್ಯ ಕಚೇರಿಯಲ್ಲಿ ನಡೆದ ಸರಳ ಆದರೆ ಭಾವನಾತ್ಮಕ ಸಮಾರಂಭದಲ್ಲಿ ಅಧಿಕಾರಿಗಳು, ಸಿಬ್ಬಂದಿ ಹಾಗೂ ಹ್ಯಾಂಡ್ಲರ್‌ಗಳು ಅಲ್ಟಿಯ ಸೇವೆಯನ್ನು ಸ್ಮರಿಸಿ ಗೌರವ ಸಲ್ಲಿಸಿದರು.
2018ರ ಆಗಸ್ಟ್ 11ರಂದು ಜನಿಸಿದ ಅಲ್ಟಿ, ಮೂರು ತಿಂಗಳ ವಯಸ್ಸಿನಲ್ಲೇ ಎಎನ್‌ಎಫ್‌ಗೆ ಸೇರ್ಪಡೆಗೊಂಡಿತು. ಬೆಂಗಳೂರಿನ ಸಿಆರ್‌ಪಿಎಫ್ ಡಾಗ್ ಬ್ರೀಡಿಂಗ್ ಆ್ಯಂಡ್ ಟ್ರೈನಿಂಗ್ ಸೆಂಟರ್‌ನಲ್ಲಿ 13 ತಿಂಗಳ ಕಠಿಣ ತರಬೇತಿ ಪಡೆದು ಸ್ಫೋಟಕ ಮತ್ತು ಐಇಡಿ ಪತ್ತೆ, ಅಸಾಲ್ಟ್ ಕಾರ್ಯಾಚರಣೆ ಹಾಗೂ ಶೋಧ ಕಾರ್ಯಗಳಲ್ಲಿ ಪರಿಣತಿ ಗಳಿಸಿತು. ಬಳಿಕ ಕಾರ್ಕಳ ಘಟಕಕ್ಕೆ ನಿಯೋಜನೆಗೊಂಡು ತನ್ನ ಸೇವಾ ಜೀವನವನ್ನು ಆರಂಭಿಸಿತು.
ಅಲ್ಟಿಯ ಬಹುತೇಕ ಸೇವಾ ಅವಧಿ ಪಶ್ಚಿಮಘಟ್ಟದ ದಟ್ಟ ಅರಣ್ಯಗಳಲ್ಲೇ ಕಳೆದಿತ್ತು. ಆಗುಂಬೆ, ಹೆಬ್ರಿ, ಜಯಪುರ, ಶೃಂಗೇರಿ, ಕೊಲ್ಲೂರು, ಸುಬ್ರಹ್ಮಣ್ಯ, ಮಡಿಕೇರಿ ಸೇರಿದಂತೆ ನಕ್ಸಲ್ ಪೀಡಿತ ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ನಡೆದ ಕೋಂಬಿAಗ್, ಪ್ಯಾಟ್ರೋಲಿಂಗ್ ಹಾಗೂ ಶೋಧ ಕಾರ್ಯಾಚರಣೆಗಳಲ್ಲಿ ಮುಂಚೂಣಿಯಲ್ಲಿ ಪಾಲ್ಗೊಂಡಿತ್ತು. ಸ್ಫೋಟಕ ವಸ್ತುಗಳು ಮತ್ತು ಐಇಡಿ ಪತ್ತೆಯಲ್ಲಿ ಅದರ ಕಾರ್ಯಕ್ಷಮತೆ ಎಎನ್‌ಎಫ್ ಕಾರ್ಯಾಚರಣೆಗಳಿಗೆ ಮಹತ್ವದ ಬಲವಾಗಿತ್ತು.
ಮುಖ್ಯಮಂತ್ರಿ ಸೇರಿದಂತೆ ಹಲವು ಗಣ್ಯರ ಅರಣ್ಯ ಪ್ರದೇಶಗಳ ಭೇಟಿಯ ವೇಳೆ ಬಾಂಬ್ ಪತ್ತೆ ಹಾಗೂ ಭದ್ರತಾ ಪರಿಶೀಲನೆಯ ಜವಾಬ್ದಾರಿಯನ್ನೂ ಅಲ್ಟಿ ಸಮರ್ಥವಾಗಿ ನಿರ್ವಹಿಸಿತ್ತು. ಅದರ ಯಶಸ್ವಿ ಸೇವೆಯ ಹಿಂದೆ ಹ್ಯಾಂಡ್ಲರ್‌ಗಳಾದ ಪ್ರದೀಪ್ ಬಿ.ಡಿ. ಮತ್ತು ಧನಂಜಯ್ ಅವರ ಸಮರ್ಪಣೆ ಹಾಗೂ ವೃತ್ತಿಪರತೆ ಪ್ರಮುಖ ಪಾತ್ರ ವಹಿಸಿತ್ತು.
ಎಂಟು ವರ್ಷಗಳ ಸೇವೆ ಪೂರ್ಣಗೊಳಿಸಿ ಅಲ್ಟಿ ನಿವೃತ್ತಿಯಾದರೂ, ಅದರ ನಿಷ್ಠೆ, ಧೈರ್ಯ ಮತ್ತು ಕರ್ತವ್ಯಪ್ರಜ್ಞೆ ಎಎನ್‌ಎಫ್ ಇತಿಹಾಸದಲ್ಲಿ ಸದಾ ನೆನಪಾಗಲಿದೆ. ಪ್ರಸ್ತುತ ಶ್ವಾನದಳದಲ್ಲಿ ಅಮರಿ, ಅಗರಾ ಮತ್ತು ಆಂಜಿ ಸೇವೆ ಮುಂದುವರಿಸಿವೆ.




.
.
.
.
.
.
.
.
.
.
.
.
.
.
.
.
.
.
.
.
