
ಹೆಬ್ರಿ, ಆ.01: ನಗರದ ಯುವ ಜನತೆಗೆ ಕಾಡಂಚಿನ ಹಳ್ಳಿ ಬದುಕನ್ನು ಪರಿಚಯಿಸಲು ಬೆಂಗಳೂರಿನ ರೈನಥಾನ್ ಸಂಸ್ಥೆಯು ಆಗಸ್ಟ್ 1 ರಂದು ಹೆಬ್ರಿ ತಾಲೂಕಿನ ಕಬ್ಬಿನಾಲೆಯಲ್ಲಿ ಹಮ್ಮಿಕೊಂಡಿದ್ದ ಮಳೆ ನಡಿಗೆ ಕಾರ್ಯಕ್ರಮ ದಿಢೀರ್ ರದ್ದಾಗಿದೆ. ಕುದುರೆಮುಖ ವನ್ಯಜೀವಿ ವಿಭಾಗದ ಅರಣ್ಯಾಧಿಕಾರಿಗಳು,ಮುದ್ರಾಡಿ ಪಂಚಾಯತ್ ಆಡಳಿತ ಹಾಗೂ ಪೊಲೀಸ್ ಇಲಾಖೆ ಮಳೆ ನಡಿಗೆ ಕಾರ್ಯಕ್ರಮ ಆಯೋಜನೆಗೆ ಅನುಮತಿ ನಿರಾಕರಿಸಿರುವ ಹಿನ್ನಲೆಯಲ್ಲಿ ರೈನಥಾನ್ ಸಂಸ್ಥೆಯು ಮಳೆ ನಡಿಗೆ ಕಾರ್ಯಕ್ರಮವನ್ನು ರದ್ದುಪಡಿಸಿದೆ.
ಹಳ್ಳಿಯ ಹಾಗೂ ಅರಣ್ಯ ಪ್ರದೇಶದ ಜೀವನ ಪದ್ಧತಿಯನ್ನು ನಗರವಾಸಿಗಳಿಗೆ ಪರಿಚಯಿಸುವ ನಿಟ್ಟಿನಲ್ಲಿ ಬೆಂಗಳೂರಿನ ರೈನಥಾನ್ ಸಂಸ್ಥೆಯು ತನ್ನ 19ನೇ ವರ್ಷದ ಕಾರ್ಯಕ್ರಮದ ಅಂಗವಾಗಿ ಮಳೆನಡಿಗೆ ಎನ್ನುವ ಒಂದು ದಿನದ ವಿಶೇಷ ಕಾರ್ಯಕ್ರಮ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸುವವರು ತಮ್ಮ ಒಂದು ದಿನದ ಬ್ಯುಸಿ ಲೈಪ್ ಬದಿಗಿರಿಸಿ ಮೊಬೈಲ್, ಕಂಪ್ಯೂಟರ್ ಬದಿಗಿರಿಸಿ ಒಂದು ದಿನ ಹತ್ತಾರು ಕಿ.ಮೀ ಮಳೆಯಲ್ಲಿ ನಡೆಯುವುದರ ಜೊತೆಗೆ ಗದ್ದೆ ಹಾಗೂ ಹಳ್ಳಕೊಳ್ಳಗಳಲ್ಲಿ ಆಟೋಟ ಹಾಗೂ ಕ್ರೀಡೆಗಳಲ್ಲಿ ಭಾಗಿಯಾಗಿ ದಿನದ ಜಂಜಾಟವನ್ನು ಒಂದು ದಿನದ ಮಟ್ಟಿ ಮರೆಸುವುದು ಈ ಸಂಸ್ಥೆಯ ಉದ್ದೇಶವಾಗಿದೆ.
ಈ ಮಳೆ ನಡಿಗೆ ಕಾರ್ಯಕ್ರಮಕ್ಕಾಗಿ ರೈನಥಾನ್ ಸಂಸ್ಥೆಯು ತನ್ನ ವೆಬ್ ಸೈಟ್ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ 4100 ನೋಂದಣಿ ಶುಲ್ಕ ನಿಗದಿಪಡಿಸಿತ್ತು ಇದಲ್ಲದೇ ನೇರವಾಗಿ ಬೇಸ್ ಕ್ಯಾಂಪಿಗೆ ಬರುವವರು 1600 ಪಾವತಿಸಬೇಕಿತ್ತು. ಸಂಸ್ಥೆಯ ಈ ನಿಲುವಿನ ವಿರುದ್ಧ ಭಾರೀ ಟೀಕೆಗಳು ವ್ಯಕ್ತವಾಗಿತ್ತು. ಇದಲ್ಲದೇ ಅರಣ್ಯ ಪ್ರದೇಶದಲ್ಲಿ ಕಮರ್ಷಿಯಲ್ ಇವೆಂಟ್ ಮಾಡುವುದಕ್ಕೆ ಪರಿಸರ ಹೋರಾಟಗಾರರು ತೀವೃ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನಲೆಯಲ್ಲಿ ಅಧಿಕಾರಿಗಳು ಮಳೆ ನಡಿಗೆ ಕಾರ್ಯಕ್ರಮಕ್ಕೆ ಅನುಮತಿ ನೀಡಿಲ್ಲ ಎನ್ನುವ ಮಾತುಗಳು ಕೇಳಿಬಂದಿದೆ.




.
.
.
.
.
.
.
.
.
.
.
.
.
.
.
.
.
.
.
.
