
ನವದೆಹಲಿ, ಆ.05: ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿರುವ ತಪ್ಪು ಮಾಹಿತಿ ಆಧಾರದಲ್ಲಿ ಸಾರ್ವಜನಿಕ ಅಭಿಪ್ರಾಯವು ಇಂದು ನ್ಯಾಯಾಂಗ ಸ್ವಾತಂತ್ರ್ಯ ಎದುರಿಸುತ್ತಿರುವ ಅತಿ ದೊಡ್ಡ ಸವಾಲುಗಳಲ್ಲಿ ಒಂದಾಗಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಜಸ್ಟೀಸ್ ಜಾಯ್ಮಾಲ್ಯ ಬಾಗ್ಚಿ ಕಳವಳ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಮಾಧ್ಯಮವು ಹಲವು ತಲೆಗಳುಳ್ಳ ರಾಕ್ಷಸನಂತೆ ಬೆಳೆಯುತ್ತಿದೆ. ತಪ್ಪು ಮಾಹಿತಿಯು ತಿದ್ದುಪಡಿಗಿಂತ ವೇಗವಾಗಿ ಹರಡುತ್ತದೆ ಮತ್ತು ಡಿಜಿಟಲ್ ಪ್ಲಾಟ್ಫಾರ್ಮ್ಗಳಲ್ಲಿ ವ್ಯಕ್ತವಾಗುವ ಆಕ್ರೋಶ ಹಾಗೂ ಮಾಧ್ಯಮ ವಿಚಾರಣೆಗಳು ನ್ಯಾಯಾಧೀಶರ ಮೇಲೆ ತೀವೃ ಒತ್ತಡವನ್ನು ಸೃಷ್ಟಿಸುತ್ತಿವೆ. ಸುಳ್ಳುಗಳ ವಿರುದ್ಧ ವ್ಯವಹರಿಸುವ ಮೊದಲ ಜವಾಬ್ದಾರಿ ಡಿಜಿಟಲ್ ಮಧ್ಯವರ್ತಿಗಳ ಮೇಲಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ನ್ಯಾಯಾಲಯಗಳಲ್ಲಿ ಲೈವ್-ಸ್ಟ್ರೀಮಿಂಗ್ ಪಾರದರ್ಶಕತೆಯನ್ನು ಹೆಚ್ಚಿಸಿದ್ದರೂ, ಅದು ಕೆಲವು ಅನಪೇಕ್ಷಿತ ಪರಿಣಾಮಗಳಿಗೂ ಕಾರಣವಾಗಿದೆ ಎಂದು ಜಸ್ಟೀಸ್ ಬಾಗ್ಚಿ ಗಮನಸೆಳೆದಿದ್ದಾರೆ. ನ್ಯಾಯಾಲಯದ ಕಲಾಪಗಳ ಸಣ್ಣ ವೀಡಿಯೊ ತುಣುಕುಗಳನ್ನು ಕೆಲವರು ತಮ್ಮ ಸ್ವಾರ್ಥ ಹಾಗೂ ವೈಯುಕ್ತಿಕ ಲಾಭಕ್ಕಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದರಿಂದ ಸಮಾಜದಲ್ಲಿ ನ್ಯಾಯಾಂಗದ ಘನತೆಗೆ ಧಕ್ಕೆಯಾಗುವ ಸಾಧ್ಯತೆಯಿದೆ ಎಂದು ಅಭಿಪ್ರಾಯಪಟ್ಟರು.
ನ್ಯಾಯಾಲಯಗಳು ಎಲ್ಲಾ ಅರ್ಜಿಗಳ ವಿಚಾರಣೆಗೂ ಲೈವ್-ಸ್ಟ್ರೀಮಿಂಗ್ ಕಡ್ಡಾಯಗೊಳಿಸಬಾರದು ಎಂದು ಅವರು ಸಲಹೆ ನೀಡಿದರು. ಬದಲಿಗೆ ಪ್ರಕರಣದ ಸ್ವರೂಪ ಮತ್ತು ನ್ಯಾಯಯುತ ವಿಚಾರಣೆಯ ಹಕ್ಕನ್ನು ಗಮನದಲ್ಲಿಟ್ಟುಕೊಂಡು ಲೈವ್-ಸ್ಟ್ರೀಮಿಂಗ್ಗೆ ಅನುಮತಿ ನೀಡುವ ನಿರ್ಧಾರವನ್ನು ನ್ಯಾಯಾಲಯದ ವಿವೇಚನೆಗೆ ಬಿಡಬೇಕು ಎಂದರು. ಅಲ್ಲದೆ, ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ಗಳು ಲೈವ್-ಸ್ಟ್ರೀಮ್ ಮಾಡಿದ ಪ್ರಕ್ರಿಯೆಗಳ ಸುರಕ್ಷಿತ ಡಿಜಿಟಲ್ ದಾಖಲೆಗಳನ್ನು ನಿರ್ವಹಿಸಬೇಕು, ಕಾನೂನುಗಳ ಅಡಿಯಲ್ಲಿ ಅಗತ್ಯವಿರುವಾಗ ಅವುಗಳನ್ನು ಲಭ್ಯವಾಗುವಂತೆ ಮಾಡಬೇಕು ಎಂದು ಪ್ರಸ್ತಾವಿಸಿದರು.





.
.
.
.
.
.
.
.
.
.
.
.
.
.
.
.
.
.
.
.
