

ಉಡುಪಿ,ಆ.15: ರಾಜ್ಯದಲ್ಲಿ ಬಿಪಿಎಲ್ ಕಾರ್ಡ್‌ಗಳ ರದ್ದತಿ ಪ್ರಕ್ರಿಯೆ ನಡೆಯುತ್ತಿದ್ದು, ಸದ್ಯಕ್ಕೆ ಇದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಆಹಾರ ಸಚಿವ ರಿಜ್ವಾನ್ ಅರ್ಷದ್ ತಿಳಿಸಿದ್ದಾರೆ.
ಉಡುಪಿಯಲ್ಲಿ ಶನಿವಾರ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಕೇಂದ್ರ ಸರ್ಕಾರವು ರಾಜ್ಯದ 7.59 ಲಕ್ಷ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸಲು ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಈಗಾಗಲೇ ಅಂದಾಜು 4 ಲಕ್ಷ ಕಾರ್ಡ್‌ಗಳನ್ನು ರದ್ದು ಮಾಡಲಾಗಿದೆ. ಆದರೆ, ಸೂಕ್ತ ಪರಿಶೀಲನೆ ನಡೆಸುವ ಉದ್ದೇಶದಿಂದ ಉಳಿದ ಕಾರ್ಡ್‌ಗಳ ರದ್ಧತಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ನಿಲ್ಲಿಸುವಂತೆ ಸೂಚಿಸಿದ್ದೇನೆ ಎಂದು ಹೇಳಿದರು.
ಸದ್ಯ ಅಂದಾಜು 3.5 ಲಕ್ಷ ಬಿಪಿಎಲ್ ಕಾರ್ಡ್‌ಗಳ ರದ್ದತಿಯನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ಮುಂದಿನ ಕ್ರಮದ ಕುರಿತು ಸರ್ಕಾರಿ ಮಟ್ಟದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಪಡಿತರ ಕಾರ್ಡ್‌ಗಳಿಗೆ ಇ-ಕೆವೈಸಿ ಮಾಡಿಸಿ ಸುಮಾರು ಐದು ವರ್ಷಗಳಾಗಿದ್ದು, ಇದೀಗ ಮತ್ತೆ ಕೆವೈಸಿ ಮಾಡಿಸುವಂತೆ ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ. ರಾಜ್ಯದಲ್ಲಿ ಸುಮಾರು 2.59 ಕೋಟಿ ಪಡಿತರ ಕಾರ್ಡ್‌ಗಳಿಗೆ ಮತ್ತೆ ಕೆವೈಸಿ ಮಾಡಬೇಕಿದೆ ಎಂದು ಸಚಿವರು ತಿಳಿಸಿದರು. ಸೆಪ್ಟೆಂಬರ್ 31ರೊಳಗೆ ಕೆವೈಸಿ ಮಾಡಿಸಿ: ಕಾರ್ಡ್‌ದಾರರು ಮೃತಪಟ್ಟಿದ್ದರೆ ಅಥವಾ ಬಡತನ ರೇಖೆಯಿಂದ ಮೇಲಕ್ಕೆ ಬಂದಿದ್ದರೆ, ಕೆಲವರಿಗೆ ಬಿಪಿಎಲ್ ಕಾರ್ಡ್ ಅಗತ್ಯವಿಲ್ಲದಿರಬಹುದು. ಕೆವೈಸಿ ಪ್ರಕ್ರಿಯೆಯಿಂದ ಈ ಮಾಹಿತಿಗಳು ಲಭ್ಯವಾಗಲಿವೆ. ಸೆಪ್ಟೆಂಬರ್ 31ರೊಳಗೆ ಕೆವೈಸಿ ಮಾಡಿಸಿಕೊಳ್ಳಬೇಕು ಎಂದು ರಿಜ್ವಾನ್ ಅರ್ಷದ್ ಹೇಳಿದರು.
ಹೊಸ ಬಿಪಿಎಲ್ ಕಾರ್ಡ್ ನೀಡುವ ವಿಚಾರವನ್ನು ಸರ್ಕಾರಿ ಮಟ್ಟದಲ್ಲಿ ಚರ್ಚಿಸಲಾಗುವುದು. ನಿನ್ನೆಯಷ್ಟೇ ಇಲಾಖೆಯ ಪ್ರಭಾರ ವಹಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.








.
.
.
.
.
.
.
.
.
.
.
.
.
.
.
.
.
.
.
.
