

ಬೆಂಗಳೂರು, ಸೆ. 07: ರಾಜ್ಯಾದ್ಯಂತ ನಕಲಿ ವೈದ್ಯರ ಹಾವಳಿ ಮಿತಿಮೀರುತ್ತಿದ್ದು, ರೋಗಿಗಳನ್ನೇ ಬಂಡವಾಳವನ್ನಾಗಿಸಿ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಕೊವಿಡ್ ಸಾಂಕ್ರಾಮಿಕದ ಬಳಿಕ ಸೂಕ್ತ ಪದವಿ, ತರಬೇತಿ ಹಾಗೂ ನೋಂದಣಿ ಇಲ್ಲದೆಯೇ ತಲೆ ಎತ್ತಿರುವ ಸಾವಿರಾರು ನಕಲಿ ಕ್ಲಿನಿಕ್ಗಳ ವಿರುದ್ಧ ಆರೋಗ್ಯ ಇಲಾಖೆ ಈಗ ಸಮರ ಸಾರಿದೆ.
ರಾಜ್ಯದಲ್ಲಿ ಸುಮಾರು 583ಕ್ಕೂ ಹೆಚ್ಚು ನಕಲಿ ವೈದ್ಯರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ. ಆದರೂ ಆರೋಗ್ಯ ಇಲಾಖೆಗೆ ನಕಲಿ ವೈದ್ಯರ ವಿರುದ್ಧ ದೂರುಗಳು ಬರುತ್ತಿದ್ದು ಕ್ರಮಕೈಗೊಳ್ಳುವುದೇ ಸವಾಲಿನ ಸಂಗತಿಯಾಗಿದೆ. ಅಲೋಪಥಿ, ಆಯುರ್ವೇದ, ಹೋಮಿಯೋಪಥಿ ಹಾಗೂ ನ್ಯಾಚುರೋಪಥಿ ಹೆಸರುಗಳಲ್ಲಿ ಅನಧಿಕೃತ ದಂಧೆ ನಡೆಸುತ್ತಿರುವವರ ಪಟ್ಟಿಯನ್ನು ಇಲಾಖೆ ಸಿದ್ಧಪಡಿಸಿದೆ.
ಗಡಿ ಭಾಗದ ಜಿಲ್ಲೆಗಳಲ್ಲಿ ಹಾಗೂ ಬೆಂಗಳೂರಿನಲ್ಲಿ ಕೆಲವರು ‘ಮೊಬೈಲ್ ಕ್ಲಿನಿಕ್’ ಮಾಡಿಕೊಂಡು ಪ್ರತಿದಿನ ಸ್ಥಳ ಮತ್ತು ಫೋನ್ ನಂಬರ್ ಬದಲಾಯಿಸುತ್ತಾ ಚಿಕಿತ್ಸೆ ನೀಡುತ್ತಿದ್ದಾರೆ. ಕೆಲವು ನಿರುದ್ಯೋಗಿಗಳು ಜನರ ಅನಾರೋಗ್ಯವನ್ನೇ ಬಂಡವಾಳ ಮಾಡಿಕೊಂಡು ವೈದ್ಯಕೀಯ ಪದವಿ ಇಲ್ಲದೆಯೇ ಕ್ಲಿನಿಕ್ ತೆರೆದು ಚಿಕಿತ್ಸೆ ನೀಡುತ್ತಿರುವುದು ಬೆಳಕಿಗೆ ಬಂದಿದೆ. ನಕಲಿ ವೈದ್ಯರು ನೀಡುವ ಅವೈಜ್ಞಾನಿಕ ಮಾತ್ರೆ ಮತ್ತು ಚಿಕಿತ್ಸೆಯಿಂದ ಸಾರ್ವಜನಿಕರ ಜೀವಕ್ಕೆ ಸಂಚಕಾರ ಒದಗುತ್ತಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು, ಸಾರ್ವಜನಿಕರು ಸಹ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದೆ.
ರೋಗಿಗಳು ಯಾವುದೇ ಕ್ಲಿನಿಕ್ ಅಥವಾ ಆಸ್ಪತ್ರೆಗೆ ತೆರಳುವ ಮುನ್ನ ವೈದ್ಯರ ಪ್ರಮಾಣಪತ್ರ ಮತ್ತು ಆಸ್ಪತ್ರೆಯ ಮಾನ್ಯತೆಯನ್ನು ಕಡ್ಡಾಯವಾಗಿ ಪರಿಶೀಲಿಸಬೇಕು. ಸಿಕ್ಕ ಸಿಕ್ಕ ಕ್ಲಿನಿಕ್ಗಳಿಗೆ ಹೋಗಿ ತುರ್ತು ಚಿಕಿತ್ಸೆ ಪಡೆಯುವ ಬದಲು ಅಧಿಕೃತ ವೈದ್ಯರನ್ನು ಮಾತ್ರ ಸಂಪರ್ಕಿಸಬೇಕು. ನಕಲಿ ವೈದ್ಯರನ್ನು ಮಟ್ಟಹಾಕಲು ಆರೋಗ್ಯ ಇಲಾಖೆ ನಡೆಸುತ್ತಿರುವ ವಿಶೇಷ ಕಾರ್ಯಾಚರಣೆಗೆ ಸಾರ್ವಜನಿಕರು ಮಾಹಿತಿ ನೀಡಿ ಸಹಕರಿಸಬೇಕು.
ನಕಲಿ ವೈದ್ಯರ ಜಾಲವನ್ನು ನಿರ್ಮೂಲನೆ ಮಾಡಲು ಸರ್ಕಾರ ಮುಂದಾಗಿದ್ದು, ಸಾರ್ವಜನಿಕರು ಕೂಡ ಎಚ್ಚರಿಕೆ ವಹಿಸಿದರೆ ಮಾತ್ರ ಈ ನಕಲಿ ವೈದ್ಯರ ದಂಧೆಗೆ ಕಡಿವಾಣ ಹಾಕಬಹುದಾಗಿದೆ.





.
.
.
.
.
.
.
.
.
.
.
.
.
.
.
.
.
.
.
.
