

ಕಾರ್ಕಳ, ಸೆ.10: ಅಧಿಕಾರಿಗಳೊಂದಿಗೆ ಶಾಸಕರ ಮೀಟಿಂಗ್ ದಿನಾಂಕ ನಿಗದಿಯಾದ ತಕ್ಷಣವೇ ಕಾರ್ಕಳ ಕಾಂಗ್ರೆಸ್ ಮತ್ತು ಅವರ ನಾಯಕ ಉದಯ ಶೆಟ್ಟಿಯವರು ನಿದ್ದೆಯಿಂದ ಎದ್ದಂತೆ ವರ್ತಿಸುವುದು ಇದೇನು ಹೊಸತಲ್ಲ. ಜನರಿಂದ ತಿರಸ್ಕರಿಸಲ್ಪಟ್ಟ ನಾಯಕರುಗಳು ತಮ್ಮ ಅಸ್ತಿತ್ವಕ್ಕಾಗಿ ಜನಪರ ಕೆಲಸ ಮಾಡುವುದನ್ನು ಬಿಟ್ಟು ರಾಜಕೀಯ ಪ್ರಹಸನದಲ್ಲಿ ತೊಡಗಿದ್ದಾರೆ ಎಂದು ಕಾರ್ಕಳ ಬಿಜೆಪಿ ವಕ್ತಾರ ರವೀಂದ್ರ ಮೊಯ್ಲಿ ಆರೋಪಿಸಿದ್ದಾರೆ
ಕಾಂಗ್ರೆಸ್ ನಾಯಕರು ಈಗಾಗಲೇ ಪೋಸ್ಟರ್ ಅಭಿಯಾನ ಮಾಡಲು ಹೋಗಿ ಜನ ಸಾಮಾನ್ಯರಿಂದ ಉಗಿಸಿಕೊಂಡು ಅವಮಾನಕ್ಕೀಡಾಗಿದ್ದು, ಈಗ ಮತ್ತೆ ಆಶ್ರಯ ಮನೆ ವಿತರಣೆ ಬಗ್ಗೆ ತಮ್ಮ ರಾಜಕೀಯದ ಬೀದಿ ನಾಟಕ ಆರಂಭಿಸಿದ್ದಾರೆ.
ಕೇಂದ್ರ ಸರಕಾರದ ಪ್ರಧಾನ ಮಂತ್ರಿಗಳ ಅವಾಸ್ ಯೋಜನೆ (ನಗರ) ಸರ್ವರಿಗೂ ಸೂರು ಅಭಿಯಾನದಡಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಬೆಂಗಳೂರು ಇದರ ಮುಖೇನ ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ಬಡತನ ರೇಖೆಗಿಂತ ಕೆಳಗಿರುವ ವಸತಿ ರಹಿತರಿಗೆ ಸೂರು ಕಲ್ಪಿಸುವ ಯೋಜನೆ ಇದಾಗಿದ್ದು, ಈ ಯೋಜನೆಯನ್ವಯ ಕೇಂದ್ರ ಸರಕಾರ, ರಾಜ್ಯ ಸರಕಾರ ಅನುದಾನ ನೀಡುತ್ತಿದ್ದು, ಫಲಾನುಭವಿಗಳ ವಂತಿಗೆ ಕೂಡ ಸೇರಿಸಿ ಮನೆ ನಿರ್ಮಾಣವಾಗಲಿದೆ. ಅಂತೆಯೇ ರಾಜ್ಯ ಸರಕಾರ ಪ್ರತೀ ಫಲಾನುಭವಿಯಿಂದ ರೂಪಾಯಿ 1 ಲಕ್ಷ ಸಂಗ್ರಹಿಸಲು ಆದೇಶ ನೀಡಿರುತ್ತದೆ. ಈ ಯೋಜನೆಯಡಿಯಲ್ಲಿ ಕಾರ್ಕಳ ಪತ್ತೊಂಜಿಕಟ್ಟೆಯ ಗುಂಡ್ಯ ಪ್ರದೇಶದಲ್ಲಿ ಸುಮಾರು 250 ಮನೆಗಳಿರುವ ವಸತಿ ಸಮುಚ್ಚಯ ನಿರ್ಮಾಣ ಕಾಮಗಾರಿ ಆರಂಭವಾಗಿದ್ದು, ಸುಮಾರು 95% ಕಾಮಗಾರಿ ಮುಗಿದಿದ್ದು, ಅಂತಿಮ ಹಂತದ ಕಾಮಗಾರಿ ಭರದಿಂದ ಸಾಗುತ್ತಿದೆ. ಈ ಯೋಜನೆಯ ಫಲಾನುಭವಿಯಾಗಲು ಕೆಲವೊಂದು ಮಾನದಂಡಗಳಿದ್ದು, ಮುಖ್ಯವಾಗಿ ಆತ ಯಾವುದೇ ಸ್ಥಿರಾಸ್ತಿ/ ವಸತಿ ಹೊಂದಿರಬಾರದು, ಆತ ಬಿ.ಪಿ.ಎಲ್ ಕಾರ್ಡುದಾರನಾಗಿರಬೇಕು ಹಾಗೂ ಪುರಸಭಾ ವ್ಯಾಪ್ತಿಯ ನಿವಾಸಿಯಾಗಿರಬೇಕು. ಮೊದಲ ಹಂತದಲ್ಲಿ ಈಗಾಗಲೇ 150 ಅರ್ಜಿಗಳು ಬಂದಿದ್ದು, ಅದರ ಪರಿಶೀಲನೆಗಾಗಿ ಕಂದಾಯ ಇಲಾಖೆಗೆ ನೀಡಿದ್ದು, ಅವುಗಳಲ್ಲಿ 98 ಅರ್ಜಿಗಳನ್ನು ಅರ್ಹತಾ ಪಟ್ಟಿಯಲ್ಲಿ ಸೇರಿಸಲಾಗಿದೆ, ಎರಡನೇ ಹಂತದಲ್ಲಿ 113 ಅರ್ಜಿಗಳು ಬಂದಿದ್ದು, ಅದನ್ನು ಕೂಡ ಕಂದಾಯ ಇಲಾಖೆಗೆ ಕಳುಹಿಸಿ ಕೊಡಲಾಗಿದೆ. ಕಂದಾಯ ಇಲಾಖೆಯ ಪರಿಶೀಲನೆಯ ಬಳಿಕ ಮುಂದಿನ ಪ್ರಕ್ರಿಯೆ ನಡೆಯಲಿದೆ.
ಶಾಸಕ ಸುನೀಲ್ ಕುಮಾರ್ ಜು. 14 ರಂದು ಈ ಕುರಿತು ಕಂದಾಯ ಅಧಿಕಾರಿಗಳ ಸಭೆ ಕರೆದು ಆದಷ್ಟು ಬೇಗ ಫಲಾನುಭವಿಗಳ ಪಟ್ಟಿ ಅಂತಿಮಗೊಳಿಸಿಸುವಂತೆ ಸೂಚಿಸಿದ್ದಾರೆ. ಪ್ರಸ್ತುತ ಅಧಿಕಾರಿಗಳು ಎಸ್.ಐ.ಆರ್ ಕಾರ್ಯದಲ್ಲಿ ತೊಡಗಿದ್ದು, ಅದು ಮುಗಿದ ಕೂಡಲೇ ಫಲಾನುಭವಿಗಳ ಪಟ್ಟಿ ಅಂತಿಮವಾಗಲಿದೆ. ಕಾರ್ಕಳ ಶಾಸಕರು ಮೊದಲ ಹಂತದಲ್ಲಿ ಮಾನ್ಯತೆ ಪಡೆದಿರುವ 98 ಅರ್ಜಿಗಳ ಫಲಾನುಭವಿಗಳಿಗೆ ಮನೆ ವಿತರುಸುವ ಕುರಿತು ಅಧಿಕಾರಿಗಳೊಂದಿಗೆ ಈಗಾಗಲೇ ಮುಂದಿನ ಎರಡು ಮೂರು ದಿನಗಳಲ್ಲಿ ಸಭೆ ನಡೆಸಲು ದಿನಾಂಕ ನಿಗದಿಪಡಿಸಲಾಗಿದೆ. ಇದನ್ನು ಅರಿತ ಕಾಂಗ್ರೆಸ್ಸಿಗರು ಈ ರೀತಿಯ ಪ್ರತಿಭಟನೆಯ ನಾಟಕ ಆಡುತ್ತಿದ್ದಾರೆ. ಮಾತ್ರವಲ್ಲದೇ ಕಾಂಗ್ರೆಸ್ಸಿಗರ ಭೌತಿಕ ದಿವಾಳಿತನವನ್ನು ತೋರಿಸುತ್ತದೆ.
ಕಾರ್ಕಳದಲ್ಲಿ 2027 ರಲ್ಲಿ ನಡೆಯುವ ಮಹಾಮಸ್ತಕಾಭಿಷೇಕಕ್ಕೆ ನಡೆಯಬೇಕಾದ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಶಾಸಕರು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅನುದಾನ ಬಿಡುಗಡೆಗೆ ಪ್ರಯತ್ನಿಸಿರುವುದನ್ನು ಗಮನಿಸಿ ಈ ರೀತಿಯ ಪ್ರಚಾರದ ಗಿಮಿಕ್ಕಿಗೆ ಕಾಂಗ್ರೆಸ್ ತೊಡಗಿರುವುದು ನಾಚಿಕೆಗೇಡಿನ ಸಂಗತಿ. ಕಾರ್ಕಳದ ಜನ ಪ್ರಬುದ್ದರಾಗಿದ್ದು, ನಿಮ್ಮ ರಾಜಕೀಯ ನಾಯಕರುಗಳಿಗೆ ಮರುಳಾಗುವವರಲ್ಲ. ಇನ್ನಾದರೂ ಈ ರೀತಿಯ ರಾಜಕೀಯ ಬೀದಿ ನಾಟಕ ಬಿಟ್ಟು ಕಾರ್ಕಳದ ಅಭಿವೃದ್ಧಿಗೆ ಶಾಸಕರೊಂದಿಗೆ ಕೈ ಜೋಡಿಸಿ ಎಂದು ರವೀಂದ್ರ ಮೊಯ್ಲಿ ಸಲಹೆ ನೀಡಿದ್ದಾರೆ.





.
.
.
.
.
.
.
.
.
.
.
.
.
.
.
.
.
.
.
.
