

ಮಣಿಪಾಲ, ಸೆ.,24: ಕೇವಲ 15 ದಿನಗಳ ಮಗುವಿನ ಮೆದುಳಿನಲ್ಲಿದ್ದ ದೊಡ್ಡ ಗೆಡ್ಡೆಯನ್ನು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ನುರಿತ ವೈದ್ಯರ ತಂಡ ಶಸ್ತ್ರಚಿಕಿತ್ಸೆ ನಡೆಸಿ ವೈದ್ಯಕೀಯ ಕ್ಷೇತ್ರದಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆವೈದ್ಯರ ಅತ್ಯಂತ ಅಪಾಯಕಾರಿ ಹಾಗೂ ಅಪರೂಪದ ಸಾಧನೆಗೆ ಇಡೀ ವೈದ್ಯಲೋಕ ನಿಬ್ಬೆರಗಾಗಿದೆ..
ತಲೆಯ ಗಾತ್ರವು ಗಮನಾರ್ಹವಾಗಿ ದೊಡ್ಡದಾಗಿದ್ದ ಸ್ಥಿತಿಯಲ್ಲಿ 15 ದಿನಗಳ ಪ್ರಾಯದ ಶಿಶುವನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ಇದು ಯಾವುದಾದರೂ ಗಂಭೀರ ನರರೋಗದ ಸಮಸ್ಯೆಯಿರುವ ಕುರಿತು ತಕ್ಷಣದ ಆತಂಕವನ್ನು ಉಂಟುಮಾಡಿತು. ಮೆದುಳಿನ MRI ಸ್ಕ್ಯಾನ್‌ನಲ್ಲಿ ತಲೆಬುರುಡೆಯೊಳಗೆ ದೊಡ್ಡ ದ್ರವ್ಯರಾಶಿಯೊಂದು ಕಂಡುಬಂದಿದ್ದು, ಅದು ‘ಹೈ-ಗ್ರೇಡ್’ ಗೆಡ್ಡೆಯಾಗಿತ್ತು. 15 ದಿನಗಳ ನವಜಾತ ಶಿಶುವಿಗೆ ಶಸ್ತ್ರಚಿಕಿತ್ಸೆ ನಡೆಸುವುದು ತಾಂತ್ರಿಕವಾಗಿ ಅತ್ಯಂತ ಸವಾಲಿನ ಕೆಲಸವಾಗಿತ್ತು.ಅದರಲ್ಲೂ ಇಷ್ಟು ದೊಡ್ಡ ಗಾತ್ರದ ಗೆಡ್ಡೆಯಿರುವಾಗ ಈ ಸವಾಲು ಇನ್ನಷ್ಟು ಹೆಚ್ಚಿರುತ್ತದೆ. ಈ ವಯಸ್ಸಿನ ಮಗುವಿನಲ್ಲಿ ರಕ್ತದ ಪ್ರಮಾಣವು ಬಹಳ ಕಡಿಮೆಯಿರುವುದರಿಂದ, ಸ್ವಲ್ಪವೇ ರಕ್ತ ನಷ್ಟವಾದರೂ ಅದು ಗಂಭೀರ ಪರಿಣಾಮಗಳನ್ನು ಬೀರುವ ಸಾಧ್ಯತೆಯಿತ್ತು. ಹೀಗಾಗಿ, ಶಸ್ತ್ರಚಿಕಿತ್ಸೆ ನಡೆಸುವುದು ಹಾಗೂ ಆತಂಕಗೊಂಡಿರುವ ಪೋಷಕರಿಗೆ ಸೂಕ್ತ ಮಾಹಿತಿ ನೀಡಿ ಸಮಾಧಾನಪಡಿಸುವುದು ಇವೆರಡೂ ಅತ್ಯಂತ ಕಠಿಣವಾಗಿತ್ತು.
ಇದರಲ್ಲಿರುವ ಅಪಾಯಗಳ ಬಗ್ಗೆ ಹೆತ್ತವರಿಗೆ ಸಂಪೂರ್ಣ ಅರಿವು ಮೂಡಿಸಿದ ನಂತರ, ವೈದ್ಯಕೀಯ ತಂಡವು ಶಸ್ತ್ರಚಿಕಿತ್ಸೆಯನ್ನು ಮುಂದುವರಿಸಲು ನಿರ್ಧರಿಸಿತು.ಯಾಕೆಂದರೆ ಈ ಶಸ್ತ್ರಚಿಕಿತ್ಸೆ ಅತ್ಯಂತ ಸವಾಲಿನದಾಗಿತ್ತು, ಆದರೂ ನರರೋಗ ಶಸ್ತ್ರಚಿಕಿತ್ಸಕರು ಗೆಡ್ಡೆಯನ್ನು ಸಂಪೂರ್ಣವಾಗಿ ತೆಗೆದುಹಾಕುವಲ್ಲಿ ಯಶಸ್ವಿಯಾದರು. ಶಸ್ತ್ರಚಿಕಿತ್ಸೆಯ ನಂತರ, ಮಗುವನ್ನು ಸೂಕ್ತ ಆರೈಕೆಗಾಗಿ ನವಜಾತ ಶಿಶುಗಳ ತೀವ್ರ ನಿಗಾ ಘಟಕಕ್ಕೆ (NICU) ಸ್ಥಳಾಂತರಿಸಲಾಯಿತು. ಆರಂಭದಲ್ಲಿ ಸವಾಲುಗಳಿದ್ದರೂ, ಮಗು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸಿದೆ. ಚಿಕಿತ್ಸೆ ನಡೆದ ಒಂದು ವಾರದ ಬಳಿಕ ಮಗುವನ್ನು ಸ್ಥಿರವಾದ ಆರೋಗ್ಯ ಸ್ಥಿತಿಯಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.





.
.
.
.
.
.
.
.
.
.
.
.
.
.
.
.
.
.
.
.
