

ಕಾರ್ಕಳ, ಸೆ.24: ಬೈಲೂರಿನ ಪರಶುರಾಮ ಥೀಮ್ ಪಾರ್ಕ್ ವಿವಾದದ ಕುರಿತು ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಮತ್ತೊಂದು ಸುತ್ತಿನ ತಿಕ್ಕಾಟ ಶುರುವಾಗಿದೆ. ಪರಶುರಾಮ ಥೀಮ್ ಪಾರ್ಕ್ ಕಾಮಗಾರಿ ಮುಂದುವರಿಸಲು ಹೈಕೋರ್ಟ್ ಅನುಮತಿ ನೀಡಿರುವ ಬೆನ್ನಲ್ಲೇ ಇದರ ಕ್ರೆಡಿಟ್ ಪಡೆಯಲು ಉಭಯ ಪಕ್ಷಗಳು ಜಿದ್ದಿಗೆ ಬಿದ್ದು ಹೋರಾಟದ ಕಹಳೆ ಮೊಳಗಿಸಿದ್ದಾರೆ.
ಪರಶುರಾಮ ಥೀಮ್ ಪಾರ್ಕಿನ ಕಾಮಗಾರಿ ಮುಂದುವರಿಸುವAತೆ ಆಗ್ರಹಿಸಿ ಯರ್ಲಪಾಡಿ-ಬೈಲೂರು ಪರಶುರಾಮ ಥೀಮ್ ಪಾರ್ಕ್ ಜನಾಗ್ರಹ ಸಮಿತಿಯ ವತಿಯಿಂದ ಗುರುವಾರ ಬೈಲೂರಿನಲ್ಲಿ ಜನಾಗ್ರಹ ಸಭೆಯ ಕುರಿತು ಪೂರ್ವಭಾವಿ ಸಭೆ ಆಯೋಜಿಸಲಾಗಿತ್ತು. ಈ ಸಭೆ ಮೇಲ್ನೋಟಕ್ಕೆ ಪಕ್ಷಾತೀತ ಸಭೆಯಾಗಿದ್ದ ಹಿನ್ನಲೆಯಲ್ಲಿ ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಶೆಟ್ಟಿಯವರು ಕೂಡ ತಮ್ಮ ಬೆಂಬಲಿಗರ ಜೊತೆ ಸಭೆಯಲ್ಲಿ ಭಾಗವಹಿಸಲು ಬಂದಿದ್ದರು.ಇನ್ನೇನು ಸಭೆ ಆರಂಭವಾಗುತ್ತಿದ್ದ ಸಂದರ್ಭದಲ್ಲಿ ಉದಯ ಶೆಟ್ಟಿ ಮತ್ತವರ ಬೆಂಬಲಿಗರು ಸಭೆಗೆ ಆಗಮಿಸಲು ಬರುತ್ತಿದ್ದಂತೆಯೇ ಸಭೆಯಲ್ಲಿದ್ದ ಕೆಲವರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದಾಗ ಮಾತಿನ ಚಕಮಕಿ ನಡೆದು ಪರಸ್ಪರ ವಾಗ್ವಾದದ ಹಂತ ತಲುಪಿತ್ತು. ಇದೇವೇಳೆ ಸ್ಥಳದಲ್ಲಿದ್ದ ಪೊಲೀಸರು ಮಧ್ಯಪ್ರವೇಶಿಸಿ ಉದಯ ಶೆಟ್ಟಿ ಹಾಗೂ ಬೆಂಬಲಿಗರನ್ನು ಸಭೆಯಿಂದ ಹೊರ ಕಳುಹಿಸಿ ಪ್ರಕರಣವನ್ನು ತಿಳಿಗೊಳಿಸಿದರು.
ಇದರಿಂದ ಆಕ್ರೋಶಗೊಂಡ ಉದಯ ಶೆಟ್ಟಿ ಮತ್ತು ಕಾರ್ಯಕರ್ತರು ಬೈಲೂರಿನ ಮಾರಿಗುಡಿಗೆ ತೆರಳಿ ಪರಶುರಾಮ ಥೀಮ್ ಪಾರ್ಕಿನಲ್ಲಿ ನಕಲಿ ಪರಶುರಾಮನ ಮೂರ್ತಿಯನ್ನು ಸ್ಥಾಪಿಸಲಾಗಿದೆ. ತುಳುನಾಡಿನ ಪ್ರತೀಕವಾದ ಪರಶುರಾಮನ ನಕಲಿ ಪ್ರತಿಮೆ ಪ್ರತಿಷ್ಠಾಪಿಸಿರುವುದು ನಾಚಿಕೆಗೇಡು.ನಾವು ಈ ಯೋಜನೆ ಮುಂದುವರಿಸಲು ಯತ್ನಿಸದರೂ ಇದಕ್ಕೆ ಶಾಸಕರು ರಾಜಕೀಯ ದುರುದ್ದೇಶದಿಂದ ಅಡ್ಡಗಾಲು ಹಾಕುತ್ತಿದ್ದಾರೆ. ನಕಲಿ ಪ್ರತಿಮೆ ಸ್ಥಾಪಿಸಿದ ಶಾಸಕರಿಗೆ ಹಾಗೂ ಈ ವಿಚಾರದಲ್ಲಿ ಪುಂಡಾಟಿಕೆ ನಡೆಸುವವರಿಗೆ ಇನ್ನಾದರೂ ದೇವರು ಒಳ್ಳೆಯ ಬುದ್ದಿ ಕೊಡಲಿ. ನಕಲಿ ಪ್ರತಿಮೆ ಸ್ಥಾಪಿಸಿದ ಪಾಪ ಅವರಿಗೆ ತಟ್ಟಲಿ ಎಂದು ಮಾರಿಯಮ್ಮ ದೇವರ ಮುಂದೆ ಪ್ರಾರ್ಥಿಸಿದರು.





.
.
.
.
.
.
.
.
.
.
.
.
.
.
.
.
.
.
.
.
