

ಬೆಂಗಳೂರು, ಅ.08: ಭಾರೀ ಸರಕು ಸಾಗಣೆ ವಾಹನ ಮತ್ತು ಭಾರೀ ಪ್ರಯಾಣಿಕ ವಾಹನ ಪೆಟ್ರೋಲ್ ಎಂಜಿನ್ ಗಳ ದುರಸ್ತಿ ಕಾರ್ಯಾಗಾರದಲ್ಲಿ ಸೇವಾನುಭವ ಹೊಂದಿಲ್ಲ ಎಂಬ ಕಾರಣಕ್ಕೆ ಆಯ್ಕೆಯಾದ ಅಭ್ಯರ್ಥಿಗಳ ನೇಮಕಾತಿಯನ್ನು ತಡೆಹಿಡಿಯಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಆದ್ದರಿಂದ ಸಾರಿಗೆ ಇಲಾಖೆಯ 150 ಮೋಟಾರು ವಾಹನ ನಿರೀಕ್ಷಕರ ಹುದ್ದೆಗಳ ಪರಿಷ್ಕೃತ ಅಂತಿಮ ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಅಭ್ಯರ್ಥಿಗಳಿಗೆ ಮುಂದಿನ ಎರಡು ತಿಂಗಳ ಒಳಗೆ ನೇಮಕಾತಿ ಆದೇಶ ನೀಡುವಂತೆ ರಾಜ್ಯ ಸರ್ಕಾರ ಹಾಗೂ ಸಾರಿಗೆ ಇಲಾಖೆಗೆ ಕರ್ನಾಟಕ ಹೈಕೋರ್ಟ್ ನಿರ್ದೇಶನ ನೀಡಿದೆ. ಅಭ್ಯರ್ಥಿಗಳು ಇತರೆ ಎಲ್ಲಾ ಅಗತ್ಯ ಷರತ್ತುಗಳನ್ನು ಪೂರೈಸಿದ್ದರೆ, ಭಾರೀ ಸರಕು ಸಾಗಾಟ ವಾಹನಗಳು ಮತ್ತು ಭಾರೀ ಪ್ರಯಾಣಿಕರ ವಾಹನಗಳ ಸೇವಾನುಭವದ ಕುರಿತು ಗೊಂದಲಗಳಿದ್ದರೂ ನೇಮಕಾತಿ ಆದೇಶ ನೀಡಬಹುದು ಎಂದು ನ್ಯಾಯಪೀಠ ತಿಳಿಸಿದೆ.
ಉದ್ಯೋಗ ಆಕಾಂಕ್ಷಿಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್. ದೇವದಾಸ್ ಹಾಗೂ ನ್ಯಾಯಮೂರ್ತಿ ಡಾ. ಕೆ. ಮನ್ಮಥ ರಾವ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ಮಹತ್ವದ ಆದೇಶವನ್ನು ಹೊರಡಿಸಿದೆ. ಇದರಿಂದಾಗಿ ಹಲವು ವರ್ಷಗಳಿಂದ ನೇಮಕಾತಿ ಆದೇಶಕ್ಕಾಗಿ ಕಾಯುತ್ತಿದ್ದ ಅಭ್ಯರ್ಥಿಗಳಿಗೆ ದೊಡ್ಡ ಮಟ್ಟದ ಸಮಾಧಾನ ಸಿಕ್ಕಂತಾಗಿದೆ.
ಪ್ರಕರಣದ ಹಿನ್ನೆಲೆ:
2016ರ ಫೆಬ್ರವರಿಯಲ್ಲಿ ಕೆಪಿಎಸ್ಸಿ 150 ಮೋಟಾರು ನಿರೀಕ್ಷಕರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿತ್ತು. ನಿಯಮಾವಳಿಗಳ ಪ್ರಕಾರ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ನ ಲಘು, ಭಾರೀ ಸರಕು ಮತ್ತು ಪ್ರಯಾಣಿಕ ವಾಹನಗಳ ದುರಸ್ತಿ ಕಾರ್ಯಾಗಾರದಲ್ಲಿ ಕನಿಷ್ಠ 1 ವರ್ಷದ ಸೇವಾ ಅನುಭವ ಕಡ್ಡಾಯವಾಗಿತ್ತು. ಆದರೆ, ಈ ಹಿಂದೆ ಹೈಕೋರ್ಟ್ 1 ವರ್ಷದ ಸೇವಾನುಭವದ ಷರತ್ತನ್ನು ಕೈಬಿಡುವಂತೆ ಸೂಚಿಸಿತ್ತು. ಅದರಂತೆ ಕೆಪಿಎಸ್ಸಿ 2023ರ ಅಕ್ಟೋಬರ್ 26ರಂದು ಪರಿಷ್ಕೃತ ಅಂತಿಮ ಆಯ್ಕೆಪಟ್ಟಿ ಪ್ರಕಟಿಸಿ, ದಾಖಲೆ ಪರಿಶೀಲನೆಗೆ ಜಿಲ್ಲಾಧಿಕಾರಿಗಳಿಗೆ ಕಳುಹಿಸಿತ್ತು. ಆದರೆ ನೇಮಕಾತಿ ಆದೇಶ ಸಿಗದ ಅಭ್ಯರ್ಥಿಗಳು ಕೆಎಟಿ ಮೆಟ್ಟಿಲೇರಿದ್ದರು. ಎರಡು ಪ್ರತ್ಯೇಕ ಕಾರ್ಯಾಗಾರಗಳಲ್ಲಿ ಪಡೆದ ಸೇವಾನುಭವವನ್ನು ಒಟ್ಟುಗೂಡಿಸಿ 1 ವರ್ಷ ಪೂರ್ಣಗೊಂಡಿದ್ದರೆ ಅದನ್ನು ಪರಿಗಣಿಸಬೇಕು ಎಂದು ಕೆಎಟಿ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಸರ್ಕಾರ ಹಾಗೂ ಸಾರಿಗೆ ಇಲಾಖೆ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದು, ಇದೀಗ ಹೈಕೋರ್ಟ್ ಅಭ್ಯರ್ಥಿಗಳ ಪರವಾಗಿ ತೀರ್ಪು ನೀಡಿ ಅರ್ಜಿ ಇತ್ಯರ್ಥಪಡಿಸಿದೆ.





.
.
.
.
.
.
.
.
.
.
.
.
.
.
.
.
.
.
.
.
