

ಬೆಂಗಳೂರು, ಅ.19: ಸಾರ್ವಜನಿಕರಿಗೆ ನೀಡುವ ನಾಗರಿಕ ಸೇವೆಗಳನ್ನು ಮತ್ತಷ್ಟು ಕಡ್ಡಾಯವಾಗಿ, ಪಾರದರ್ಶಕವಾಗಿ ಹಾಗೂ ಚುರುಕಾಗಿ ತಲುಪಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಎಲ್ಲಾ ನಾಗರಿಕ ಸೇವೆಗಳನ್ನು ಕಡ್ಡಾಯವಾಗಿ ಆನ್‌ಲೈನ್ ವ್ಯವಸ್ಥೆಗೆ ತರುವುದು ಮತ್ತು ‘ಸಕಾಲ’ ಯೋಜನೆಯ ವ್ಯಾಪ್ತಿಗೆ ಅಳವಡಿಸುವುದು ಸೇರಿದಂತೆ ಗಮನಾರ್ಹ ಸುಧಾರಣೆಗಳನ್ನು ತರಲು ಹೊಸ ಪ್ರಮಾಣಿತ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2 ನೀಡಿದ್ದ ಪ್ರಮುಖ ಶಿಫಾರಸುಗಳ ಆಧಾರದ ಮೇಲೆ ಪ್ರಜಾ ಸೇವಾ ಇಲಾಖೆಯು ಈ ನೂತನ ನಿಯಮಗಳನ್ನು ಜಾರಿಗೆ ತಂದಿದೆ.
ಹೊಸ ಮಾರ್ಗದರ್ಶಿ ಸೂತ್ರಗಳ ಪ್ರಕಾರ, ಪ್ರಸ್ತುತ ಲಭ್ಯವಿರುವ ಸೇವೆಗಳನ್ನು ಪಡೆಯಲು ನಿಗದಿಪಡಿಸಲಾದ ಕಾಲಮಿತಿಯನ್ನು ಗಣನೀಯವಾಗಿ ಕಡಿಮೆ ಮಾಡಲಾಗುವುದು. ಅಲ್ಲದೇ ಸಾಧ್ಯವಿರುವ ಎಲ್ಲಾ ಸೇವೆಗಳಿಗೆ ಕೌಂಟರ್‌ಗಳಲ್ಲಿ ಅರ್ಜಿ ಸಲ್ಲಿಸಿದ ತಕ್ಷಣವೇ ಪ್ರಮಾಣಪತ್ರಗಳನ್ನು ನೀಡಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಜಾ ಸೇವಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ ತಿಳಿಸಿದ್ದಾರೆ. ಇದರಿಂದಾಗಿ ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದು ತಪ್ಪಲಿದ್ದು, ಕಾಲಮಿತಿಯಲ್ಲಿ ಸೇವೆಗಳು ಲಭ್ಯವಾಗಲಿವೆ.
ಆನ್‌ಲೈನ್ ವ್ಯವಸ್ಥೆಯಲ್ಲಿ ಪ್ರಮುಖ ಸುಧಾರಣೆ ತರಲು ನಿರ್ಧರಿಸಲಾಗಿದ್ದು, ಬಳಕೆದಾರರ ಭದ್ರತೆಗಾಗಿ ಆಧಾರ್ ಮತ್ತು ಮೊಬೈಲ್ ಆಧಾರಿತ ಪರಿಶೀಲನಾ ವ್ಯವಸ್ಥೆ ಇರಲಿದೆ. ವಿತರಿಸಲಾಗುವ ಎಲ್ಲಾ ಪ್ರಮಾಣಪತ್ರಗಳನ್ನು ಸಾರ್ವಜನಿಕರು ‘ಡಿಜಿಲಾಕರ್’ನಲ್ಲಿ ಸುರಕ್ಷಿತವಾಗಿ ಸಂಗ್ರಹಿಸಿಟ್ಟುಕೊಳ್ಳಲು ಅವಕಾಶ ನೀಡಲಾಗುತ್ತದೆ. ತಾಂತ್ರಿಕ ಅಥವಾ ಇತರೆ ಕಾರಣಗಳಿಂದ ಅರ್ಜಿ ನಿರಾಕರಣೆಯಾದರೆ, ನಾಗರಿಕರು ಪಾವತಿಸಿದ ಶುಲ್ಕವು ಸ್ವಯಂಚಾಲಿತವಾಗಿ (ಆಟೋಮ್ಯಾಟಿಕ್) ಅವರ ಖಾತೆಗೆ ಮರುಪಾವತಿಯಾಗಲಿದೆ. ಇದರ ಜೊತೆಗೆ ಯುಪಿಐ ಸೇರಿದಂತೆ ಡಿಜಿಟಲ್ ಪಾವತಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಇದುವರೆಗೆ ಇಂಗ್ಲಿಷ್‌ನಲ್ಲಿ ಮಾತ್ರ ಲಭ್ಯವಿದ್ದ ಎಲ್ಲಾ ಅರ್ಜಿ ನಮೂನೆಗಳನ್ನು ಕಡ್ಡಾಯವಾಗಿ ಕನ್ನಡದಲ್ಲೂ ಲಭ್ಯಗೊಳಿಸಲಾಗುತ್ತದೆ. ಅರ್ಜಿಯ ಪ್ರಸ್ತುತ ಸ್ಥಿತಿಗತಿಯನ್ನು ಸಾರ್ವಜನಿಕರು ಎಸ್‌ಎಂಎಸ್ ಹಾಗೂ ವಾಟ್ಸಾಪ್ ಮೂಲಕವೇ ತಿಳಿದುಕೊಳ್ಳುವ ಸೌಲಭ್ಯವನ್ನೂ ಕಲ್ಪಿಸಲಾಗುತ್ತಿದೆ.






.
.
.
.
.
.
.
.
.
.
.
.
.
.
.
.
.
.
.
.
