

ಕಾರ್ಕಳ, ಅ.26: ಮಹರ್ಷಿ ವಾಲ್ಮೀಕಿ ನಮ್ಮ ಬದುಕಿನ ದಾರಿಗೆ ಗುರುಗಳು. ತನ್ನ ನೋವಿನ ಕಥೆಯನ್ನು 24 ಸಾವಿರ ಶ್ಲೋಕಗಳನ್ನು ಬರೆಯುವ ಮೂಲಕ ಬೇಡ ಮಹರ್ಷಿ ವಾಲ್ಮೀಕಿಯ ಎನಿಸಿಕೊಂಡ. ಆದ್ದರಿಂದ ರಾಮಾಯಣ ಮಹಾಕಾವ್ಯ ನಮ್ಮ ಬದುಕಿಗೆ ಪೀಠಿಕೆಯಾಗಿದೆ ಎಂದು ಕಾರ್ಕಳ ಭುವನೇಂದ್ರ ಹೈಸ್ಕೂಲ್ ಶಿಕ್ಷಕ ಗಣೇಶ್ ಜಾಲ್ಸೂರು ಹೇಳಿದರು.
ಅವರು ಸೋಮವಾರ ಕಾರ್ಕಳ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತ್, ಪುರಸಭೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಸಂಘಟನೆಗಳ ಸಹಯೋಗದಲ್ಲಿ ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ನಮ್ಮ ದೈನಂದಿನ ಬದುಕಿನ ಏರಿಳಿತಗಳ ನಡುವೆ ಮಹರ್ಷಿ ವಾಲ್ಮೀಕಿಯ ಜೀವನ ಆದರ್ಶಗಳು ನಮಗೆ ಪ್ರೇರಣೆಯಾಗಿದೆ ಎಂದರು. ರಾಮಾಯಣದ ಮೌಲ್ಯಗಳ ಕುರಿತು ಮಾತನಾಡಿದರು.
ತಾಲೂಕು ಪಂಚಾಯತ್ ಇಒ ಪ್ರಶಾಂತ ರಾವ್ ಮಾತನಾಡಿ,ರಾಮಾಯಣ ಮಹಾಕಾವ್ಯವು ಜಾತಿ, ಧರ್ಮ ಹಾಗೂ ಪರಂಪರೆಗಳನ್ನು ಮೀರಿದ ಮಹಾನ್ ಕಾವ್ಯವಾಗಿದೆ. ನಾವು ಮಾಡುವ ಕರ್ಮ ನಮ್ಮನ್ನು ಬಿಡಲಾರದು. ಆದ್ದರಿಂದ ಜೀವನದಲ್ಲಿ ಸತ್ಕರ್ಮಗಳನ್ನು ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಪೊಲೀಸ್ ಸಹಾಯಕ ಅಧೀಕ್ಷಕಿ ಇಶಿತಾ ಗುಪ್ತಾ, ಕಾರ್ಕಳ ಉಪತಹಶೀಲ್ದಾರ್ ಮಂಜುನಾಥ ನಾಯಕ್, ಪುರಸಭೆ ಆರೋಗ್ಯ ನಿರೀಕ್ಷಕಿ ಲೈಲಾ ಥಾಮಸ್ ಉಪಸ್ಥಿತರಿದ್ದರು.
ಸಮಾಜ ಕಲ್ಯಾಣ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಕುಮಾರ್ ನಾಯ್ಕ್ ಸ್ವಾಗತಿಸಿ ವಂದಿಸಿದರು. ವಾರ್ಡನ್ ಚೇತನಾ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ತಾಲೂಕು ಮಟ್ಟದ ಇಲಾಖಾಧಿಕಾರಿಗಳು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.





.
.
.
.
.
.
.
.
.
.
.
.
.
.
.
.
.
.
.
.
