
ಕಾರ್ಕಳ,ನ.13: ಕರ್ನಾಟಕದ ಕೈಗಾರಿಕಾ ಅಭಿವೃದ್ಧಿ ಎಂದರೆ ಬೆಂಗಳೂರು, ಮೈಸೂರು, ತುಮಕೂರು, ಹುಬ್ಬಳ್ಳಿ ಮತ್ತು ಬೆಳಗಾವಿಯ ಹೆಸರುಗಳು ಪ್ರಮುಖವಾಗಿ ಕೇಳಿಬರುತ್ತವೆ. ಆದರೆ ಪಶ್ಚಿಮ ಘಟ್ಟಗಳ ಮಡಿಲು ಮತ್ತು ಅರಬ್ಬಿ ಸಮುದ್ರದ ತೀರದಲ್ಲಿರುವ ಕರಾವಳಿ ಕರ್ನಾಟಕವು ಹೊಂದಿರುವ ಕೈಗಾರಿಕಾ ಸಾಮರ್ಥ್ಯವನ್ನು ಇನ್ನೂ ಸಂಪೂರ್ಣವಾಗಿ ಬಳಸಿಕೊಂಡಿಲ್ಲ ಎಂಬುದು ವಾಸ್ತವ. ನವಮಂಗಳೂರು ಬಂದರು, ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಕೊಂಕಣ ರೈಲ್ವೆ, ರಾಷ್ಟ್ರೀಯ ಹೆದ್ದಾರಿಗಳು, ಸಮೃದ್ಧ ಕೃಷಿ ಸಂಪನ್ಮೂಲ, ಮೀನುಗಾರಿಕೆ, ಶಿಕ್ಷಣ ಸಂಸ್ಥೆಗಳು ಹಾಗೂ ತಾಂತ್ರಿಕ ಪರಿಣತಿ ಹೊಂದಿರುವ ಯುವಜನತೆ ಇಷ್ಟೆಲ್ಲಾ ಅನುಕೂಲಗಳಿರುವ ಕರಾವಳಿ ಪ್ರದೇಶವು ದೇಶದ ಪ್ರಮುಖ ಉತ್ಪಾದನಾ ಮತ್ತು ರಫ್ತು ಕೇಂದ್ರವಾಗಿ ಬೆಳೆಯುವ ಸಾಮರ್ಥ್ಯ ಹೊಂದಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಯೋಜನೆಯಡಿ ಕರ್ನಾಟಕದ ಒಂಬತ್ತು ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಸಂಬAಧಿಸಿದAತೆ ಪ್ರಸ್ತಾವನೆಗಳು ಮುನ್ನೆಲೆಗೆ ಬಂದಿರುವುದು ಕರಾವಳಿ ಕರ್ನಾಟಕಕ್ಕೂ ಹೊಸ ಅವಕಾಶಗಳ ಬಾಗಿಲು ತೆರೆಯುವ ನಿರೀಕ್ಷೆ ಮೂಡಿಸಿದೆ. ಆದರೆ ಪ್ರಸ್ತಾವನೆ ಮತ್ತು ಅಂತಿಮ ಸರ್ಕಾರಿ ಅನುಮೋದನೆ ನಡುವಿನ ವ್ಯತ್ಯಾಸವನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಹಂತಗಳಿಗೆ ಸಿದ್ಧತೆ ಮಾಡಿಕೊಳ್ಳಬೇಕಾಗಿದೆ ಎಂದು ಸಾಣೂರು ನರಸಿಂಹ ಕಾಮತ್ ಹೇಳಿದ್ದಾರೆ.
ಉಡುಪಿ ಜಿಲ್ಲೆಯ ಪ್ರಮುಖ ಶಕ್ತಿ ಶಿಕ್ಷಣ, ವೈದ್ಯಕೀಯ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿದೆ. ಮಣಿಪಾಲದ ಶೈಕ್ಷಣಿಕ ಹಾಗೂ ವೈದ್ಯಕೀಯ ಸಂಸ್ಥೆಗಳ ಪರಿಣತಿಯನ್ನು ಕೈಗಾರಿಕಾ ಉತ್ಪಾದನೆಯೊಂದಿಗೆ ಜೋಡಿಸುವುದು ಅಗತ್ಯವಾಗಿದೆ. ವೈದ್ಯಕೀಯ ಉಪಕರಣಗಳ ತಯಾರಿಕೆ, ಬಯೋಟೆಕ್ನಾಲಜಿ, ಆರೋಗ್ಯ ತಂತ್ರಜ್ಞಾನ, ಎಲೆಕ್ಟ್ರಾನಿಕ್ಸ್, ಆಹಾರ ತಂತ್ರಜ್ಞಾನ ಮತ್ತು ಸ್ಟಾರ್ಟ್ಅಪ್ಗಳಿಗೆ ವಿಶೇಷ ಉತ್ತೇಜನ ನೀಡಬೇಕು. ಇದರಿಂದ ಸಂಶೋಧನಾ ಪ್ರಯೋಗಾಲಯಗಳಲ್ಲಿ ಸೃಷ್ಟಿಯಾಗುವ ಆವಿಷ್ಕಾರಗಳು ಸ್ಥಳೀಯ ಉತ್ಪಾದನಾ ಉದ್ಯಮಗಳಾಗಿ ಪರಿವರ್ತನೆಯಾಗಬಹುದು. ಕರಾವಳಿ ಕೈಗಾರಿಕಾ ಅಭಿವೃದ್ಧಿಯಲ್ಲಿ ಕಾರ್ಕಳಕ್ಕೆ ವಿಶೇಷ ಸ್ಥಾನಮಾನ ನೀಡಬೇಕು.ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವ ಪ್ರಮುಖ ಶಕ್ತಿಗಳಾಗಿವೆ. ಸ್ಟೀಲ್ ಫ್ಯಾಬ್ರಿಕೇಶನ್, ಯಂತ್ರೋಪಕರಣಗಳ ತಯಾರಿಕೆ, ಕಟ್ಟಡ ನಿರ್ಮಾಣ ಸಾಮಗ್ರಿಗಳು, ಕೃಷಿ ಉಪಕರಣಗಳು, ವಿದ್ಯುತ್ ಉಪಕರಣಗಳು, ಕೈಗಾರಿಕಾ ಬಿಡಿಭಾಗಗಳು, ಪ್ಯಾಕೇಜಿಂಗ್ ಮತ್ತು ಮರುಬಳಕೆ ಉದ್ಯಮಗಳಿಗೆ ಇಲ್ಲಿ ಅವಕಾಶ ಕಲ್ಪಿಸಬಹುದು.
ವಿಶೇಷವಾಗಿ ಕಾರ್ಕಳದಲ್ಲಿ ಪ್ರತ್ಯೇಕ ಒSಒಇ ಕೈಗಾರಿಕಾ ಪಾರ್ಕ್ ಸ್ಥಾಪಿಸಿ, ಸಣ್ಣ ಉದ್ಯಮಿಗಳಿಗೆ ಸಿದ್ಧ ಕೈಗಾರಿಕಾ ಶೆಡ್ಗಳು, ವಿದ್ಯುತ್, ನೀರು, ಸಾಮಾನ್ಯ ಯಂತ್ರೋಪಕರಣಗಳು ಮತ್ತು ಪರೀಕ್ಷಾ ಪ್ರಯೋಗಾಲಯಗಳನ್ನು ಒದಗಿಸಬೇಕು. ಸ್ಥಳೀಯ ಯುವ ಉದ್ಯಮಿಗಳು ದೊಡ್ಡ ಬಂಡವಾಳವಿಲ್ಲದೆಯೇ ಉತ್ಪಾದನಾ ಕ್ಷೇತ್ರಕ್ಕೆ ಪ್ರವೇಶಿಸಲು ಇದು ಸಹಕಾರಿಯಾಗಲಿದೆ. ಕುಂದಾಪುರ ಬೈಂದೂರು ಸಮುದ್ರ ಆರ್ಥಿಕತೆ ಮತ್ತು ಆಹಾರ ಸಂಸ್ಕರಣಾ ಕೇಂದ್ರ, ಮೀನುಗಾರಿಕೆ, ಗೋಡಂಬಿ, ತೆಂಗು ಮತ್ತು ಇತರ ಕೃಷಿ ಉತ್ಪನ್ನಗಳಿಗೆ ಮೌಲ್ಯವರ್ಧನೆ ಮಾಡುವ ಕೈಗಾರಿಕೆಗಳನ್ನು ಸ್ಥಾಪಿಸಬೇಕು.ಮೀನು ಸಂಸ್ಕರಣೆ, ಸಮುದ್ರ ಆಹಾರ ರಫ್ತು, ಕೋಲ್ಡ್ ಚೈನ್, ಮೀನುಗಾರಿಕಾ ಉಪಕರಣಗಳ ತಯಾರಿಕೆ ಹಾಗೂ ತೆಂಗು ಮತ್ತು ಗೋಡಂಬಿ ಆಧಾರಿತ ಉತ್ಪನ್ನಗಳ ಉತ್ಪಾದನೆಗೆ ವಿಶೇಷ ಕೈಗಾರಿಕಾ ವಲಯಗಳನ್ನು ರೂಪಿಸಬಹುದು. ಇದರಿಂದ ಮೀನುಗಾರರು ಮತ್ತು ಕೃಷಿಕರಿಗೆ ಉತ್ಪಾದಕರಾಗಿ ಮಾತ್ರವಲ್ಲದೆ ಮೌಲ್ಯವರ್ಧಿತ ಉತ್ಪನ್ನಗಳ ಉದ್ಯಮಿಗಳಾಗಿಯೂ ಬೆಳೆಯುವ ಅವಕಾಶ ದೊರೆಯುತ್ತದೆ.
ಉತ್ತರ ಕನ್ನಡದ ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುತ್ತಾ ಪರಿಸರ ಸ್ನೇಹಿ ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸಬೇಕು. ಕೃಷಿ ಉತ್ಪನ್ನಗಳ ಸಂಸ್ಕರಣೆ, ಅರಣ್ಯೇತರ ಉತ್ಪನ್ನಗಳ ಮೌಲ್ಯವರ್ಧನೆ, ಸೌರಶಕ್ತಿ ಉಪಕರಣಗಳ ಉತ್ಪಾದನೆ, ಹಸಿರು ಇಂಧನ ಮತ್ತು ಆಹಾರ ಸಂಸ್ಕರಣಾ ಘಟಕಗಳಿಗೆ ಆದ್ಯತೆ ನೀಡಬಹುದು. ಅರಣ್ಯ, ಪಶ್ಚಿಮ ಘಟ್ಟ, ಕರಾವಳಿ ನಿಯಂತ್ರಣ ವಲಯ ಮತ್ತು ಪರಿಸರ ಸೂಕ್ಷ್ಮ ಪ್ರದೇಶಗಳ ಕಾನೂನುಗಳನ್ನು ಪಾಲಿಸುವುದು ಈ ಅಭಿವೃದ್ಧಿಯ ಮೂಲಭೂತ ಷರತ್ತಾಗಿರಬೇಕು. ಕೈಗಾರಿಕಾ ಪಾರ್ಕ್ಗಳನ್ನು ಸ್ಥಾಪಿಸುವುದಷ್ಟೇ ಅಭಿವೃದ್ಧಿಯಲ್ಲ. ಉತ್ಪಾದಿಸಿದ ಸರಕುಗಳನ್ನು ದೇಶದ ವಿವಿಧ ಭಾಗಗಳಿಗೆ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ಸಾಗಿಸಲು ಸಮರ್ಥ ಸಾರಿಗೆ ವ್ಯವಸ್ಥೆ ಅಗತ್ಯ. ಈ ನಿಟ್ಟಿನಲ್ಲಿ ನವಮಂಗಳೂರು ಬಂದರಿನ ಸಾಮರ್ಥ್ಯ ವೃದ್ಧಿ, ಮಂಗಳೂರು- ಹಾಸನ ರೈಲು ಸರಕು ಸಾಗಣೆ ವ್ಯವಸ್ಥೆಯ ಸುಧಾರಣೆ, ರಾಷ್ಟ್ರೀಯ ಹೆದ್ದಾರಿ 66 ಮತ್ತು 169ರ ಸಂಪರ್ಕ ಅಭಿವೃದ್ಧಿ, ಮಂಗಳೂರು ವಿಮಾನ ನಿಲ್ದಾಣದ ಕಾರ್ಗೋ ಸಾಮರ್ಥ್ಯ ವೃದ್ಧಿ ಹಾಗೂ ಪ್ರಾದೇಶಿಕ ಲಾಜಿಸ್ಟಿಕ್ಸ್ ಪಾರ್ಕ್ಗಳ ಸ್ಥಾಪನೆಗೆ ಆದ್ಯತೆ ನೀಡಬೇಕು ಎಂದು ಅವರು ತಿಳಿಸಿದ್ದಾರೆ.
ಕರಾವಳಿ ಭಾಗದ ಸಾವಿರಾರು ಯುವಕರು ಉದ್ಯೋಗಕ್ಕಾಗಿ ಬೆಂಗಳೂರು, ಮುಂಬೈ, ಪುಣೆ ಮತ್ತು ವಿದೇಶಗಳಿಗೆ ತೆರಳುತ್ತಿದ್ದಾರೆ. ಸ್ಥಳೀಯವಾಗಿ ಕೈಗಾರಿಕೆಗಳು ಬೆಳೆದರೆ ಈ ವಲಸೆಯನ್ನು ಕಡಿಮೆ ಮಾಡುವುದರ ಜೊತೆಗೆ ಹೊಸ ಉದ್ಯಮಶೀಲತೆಯ ವಾತಾವರಣ ನಿರ್ಮಿಸಬಹುದು. ಪ್ರತಿ ಜಿಲ್ಲೆಯಲ್ಲಿ ಕೌಶಲ್ಯಾಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸುವುದು, ಐಟಿಐ ಮತ್ತು ಪಾಲಿಟೆಕ್ನಿಕ್ ಸಂಸ್ಥೆಗಳನ್ನು ಆಧುನೀಕರಿಸುವುದು, ಕೈಗಾರಿಕೆಗಳೊಂದಿಗೆ ಶಿಕ್ಷಣ ಸಂಸ್ಥೆಗಳ ಒಪ್ಪಂದ ಮಾಡಿಕೊಳ್ಳುವುದು ಹಾಗೂ ಮಹಿಳಾ ಮತ್ತು ಯುವ ಉದ್ಯಮಿಗಳಿಗೆ ವಿಶೇಷ ಸಾಲ ಸೌಲಭ್ಯ ಒದಗಿಸುವುದು ಅಗತ್ಯ.ನೀರು ಮರುಬಳಕೆ, ಸೌರಶಕ್ತಿ, ತ್ಯಾಜ್ಯದಿಂದ ಸಂಪನ್ಮೂಲ ಸೃಷ್ಟಿ, ವೃತ್ತಾಕಾರದ ಆರ್ಥಿಕತೆ ಮತ್ತು ಮಾಲಿನ್ಯ ನಿಯಂತ್ರಣ ವ್ಯವಸ್ಥೆಗಳನ್ನು ಪ್ರತಿಯೊಂದು ಕೈಗಾರಿಕಾ ವಲಯದಲ್ಲೂ ಅಳವಡಿಸಬೇಕು.
ಕರಾವಳಿ ಕರ್ನಾಟಕಕ್ಕೆ ಬೇಕಾಗಿರುವುದು ಕೇವಲ ಕೈಗಾರಿಕಾ ಘೋಷಣೆಗಳಲ್ಲ. ಸ್ಪಷ್ಟ ದೂರದೃಷ್ಟಿ, ಸಮಗ್ರ ಯೋಜನೆ, ಅಗತ್ಯ ಬಂಡವಾಳ, ಮೂಲಸೌಕರ್ಯ ಮತ್ತು ಸ್ಥಳೀಯ ಜನರ ಪಾಲ್ಗೊಳ್ಳುವಿಕೆಯೊಂದಿಗೆ ಅನುಷ್ಠಾನಗೊಳ್ಳುವ ಅಭಿವೃದ್ಧಿ ಮಾದರಿ. ಬೆಂಗಳೂರು ಕರ್ನಾಟಕದ ತಂತ್ರಜ್ಞಾನ ಶಕ್ತಿಯಾಗಿದ್ದರೆ, ಕರಾವಳಿ ಕರ್ನಾಟಕವು ದೇಶದ ಜಾಗತಿಕ ವ್ಯಾಪಾರ, ಉತ್ಪಾದನೆ, ಆಹಾರ ಸಂಸ್ಕರಣೆ ಮತ್ತು ಹಸಿರು ಕೈಗಾರಿಕಾ ಶಕ್ತಿಕೇಂದ್ರವಾಗಿ ಬೆಳೆಯಲಿ. ಇದಕ್ಕಾಗಿ ಈಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮನ್ವಯದಿಂದ ಕಾರ್ಯಪ್ರವೃತ್ತವಾಗಬೇಕಿದೆ. 2035ರ ಕರಾವಳಿ ಕರ್ನಾಟಕದ ಕನಸು ಕೇವಲ ಕೈಗಾರಿಕಾ ಬೆಳವಣಿಗೆಯಾಗಿರಬಾರದು. ಅದು ಸ್ಥಳೀಯ ಯುವಜನರ ಉದ್ಯೋಗ, ರೈತರ ಸಮೃದ್ಧಿ, ಸಹಕಾರಿ ಕ್ಷೇತ್ರದ ಸಬಲೀಕರಣ ಮತ್ತು ಪರಿಸರ ಸಂರಕ್ಷಣೆಯ ಸಮಗ್ರ ಆರ್ಥಿಕ ಕ್ರಾಂತಿಯಾಗಬೇಕು ಎಂದು ಅವರು ತಿಳಿಸಿದ್ದಾರೆ.


































.
.
.
.
.
.
.
.
.
.
.
.
.
.
.
.
.
.
.
.
