ಹೆಬ್ರಿ : ಭಾನುವಾರ ಮಧ್ಯಾಹ್ನ 3.30 ರ ಸುಮಾರು ಸುರಿದ ಭಾರೀ ಮಳೆಗೆ ಹೆಬ್ರಿ ತಾಲೂಕಿನ ಮುದ್ರಾಡಿ ಗ್ರಾಮದ ಬಲ್ಲಾಡಿ ಎಂಬಲ್ಲಿ ಹಠಾತ್ ಜಲ ಪ್ರವಾಹ ಸೃಷ್ಟಿಯಾದ ಪರಿಣಾಮ ಮನೆಗಳಿಗೆ ಹಾಗೂ ಕೃಷಿ ಜಮೀನಿಗೆ ನೀರು ನುಗ್ಗಿ ಭಾರೀ ಆವಾಂತರ ಸೃಷ್ಟಿಸಿದೆ.
ಬಲ್ಲಾಡಿಯ ಈಶ್ವರನಗರ ಸಮೀಪದ ಬಮ್ಮಗುಂಡಿ ಹೊಳೆ ಭಾರೀ ಮೇಘ ಸ್ಫೋಟದಿಂದ ಉಕ್ಕಿ ಹರಿದ ಪರಿಣಾಮವಾಗಿ ಜಲಪ್ರವಾಹ ನೇರವಾಗಿ ಮನೆಗೆ ನುಗ್ಗಿದೆ. ಭಾರೀ ನೆರೆಯಿಂದ ಮನೆಯ ಅಂಗಳದಲ್ಲಿ ನಿಲ್ಲಿಸಿದ್ದ ಎರಡು ಕಾರು ಹಾಗೂ ಎರಡು ಬೈಕ್’ಗಳು ಕೊಚ್ಚಿಕೊಂಡು ಹೋಗಿವೆ. ಕೇರಳ ಮೂಲದ ವ್ಯಕ್ತಿಗೆ ಸೇರಿದ್ದ ರಬ್ಬರ್ ತೋಟಕ್ಕೆ ನುಗ್ಗಿದ ನೀರು ಅಲ್ಲಿಂದ ಮನೆಗೆ ನುಗ್ಗಿ ಅಂಗಳದಲ್ಲಿ ನಿಲ್ಲಿಸಿದ್ದ ಆಲ್ಟೋ ಕಾರು ಹಾಗೂ ಎರಡು ಬೈಕ್ ಗಳನ್ನು ಆಹುತಿ ಪಡೆದಿದೆ. ಮನೆಯವರು ಹಾಗೂ ಗ್ರಾಮಸ್ಥರ ಕಾರು ಕೊಚ್ಚಿಕೊಂಡು ಹೋಗುತ್ತಿರುವ ವಿಡಿಯೋ ಮಾಡಿದ್ದು ಪ್ರವಾಹದ ಭೀಕರತೆ ಸಾಕ್ಷಿಯಾಗಿತ್ತು. ಇದಲ್ಲದೇ ಹೊಸಕಂಬ್ಳ ಕೃಷ್ಣ ಪೂಜಾರಿ ಎಂಬವರ ಮನೆಯಲ್ಲಿ ನಿಲ್ಲಿಸಿದ್ದ ಓಮ್ನಿ ಕಾರು ಪ್ರವಾಹದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ.
ಕಬ್ಬಿನಾಲೆ ಭಾಗದ ಪರ್ವತ ಸಾಲಿನಲ್ಲಿ ಮೇಘ ಸ್ಫೋಟವಾಗಿ ಈ ಭೀಕರ ಪ್ರವಾಹ ಸೃಷ್ಟಿಯಾಗಿದ್ದು,ಜೀವಮಾನದಲ್ಲಿ ಇಂತಹ ಭೀಕರ ಪ್ರವಾಹ ನಾವು ನೋಡಿಲ್ಲವೆಂದು ಹಿರಿಯ ನಾಗರಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಅಗ್ನಿಶಾಮಕ ದಳ ದ ಸಿಬ್ಬಂದಿಗಳು ಹಾಗೂ ವಿಪತ್ತು ನಿರ್ವಹಣಾ ತಂಡಗಳು ಧಾವಿಸಿದ್ದು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.