ಮಂಗಳೂರು: ಕರಾವಳಿಯಲ್ಲಿ ಕೋಮು ಸಂಘರ್ಷವನ್ನು ತಡೆಗಟ್ಟಲು ರಾಜ್ಯ ಸರ್ಕಾರ ಸ್ಪೆಷಲ್ ಆಕ್ಷನ್ ಫೋರ್ಸ್ ಸ್ಥಾಪಿಸಿದೆ. ದೇಶದಲ್ಲಿ ಇದೇ ಮೊದಲ ಬಾರಿಗೆ ಸ್ಥಾಪಿಸಲಾದ ಸ್ಪೆಷಲ್ ಆಕ್ಷನ್ ಫೋರ್ಸ್ ಸೋಶಿಯಲ್ ಮೀಡಿಯಾದಲ್ಲಿ ಪ್ರಚೋದನಾಕಾರಿ ಪೋಸ್ಟ್ ಹಾಕುವವರ ಮೇಲೆ ನಿಗಾ ಇರಿಸಿದ್ದು, ಪ್ರಚೋದನಾಕಾರಿ ಪೋಸ್ಟ್ ಹಾಕಿದ ಆರೋಪದ ಮೇಲೆ ಕಾರ್ಕಳದ ಯುವಕನನ್ನು ಬಂಧಿಸಿದೆ.
ಕಾರ್ಕಳ ತಾಲೂಕಿನ ಇರ್ವತ್ತೂರು ಗ್ರಾಮದ ಆಶಿಕ್ ಎಸ್.ಕೋಟ್ಯಾನ್ ಎಂಬಾತ ಬಂಧಿತ ಯುವಕ. ಈತ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ “ನಮಗೆ ಯಾವುದೇ ರೀತಿಯ ಉತ್ತರಗಳು ಬೇಡ ರಕ್ತಕ್ಕೆ ರಕ್ತವೇ ಉತ್ತರವಾಗಬೇಕು”. “ಜೀವಕ್ಕೆ ಜೀವನೇ ಬೇಕು” ಎಂದು ಮಾರಕಾಯುಧಗಳ ಚಿಹ್ನೆ ಬಳಸಿ ಪ್ರಚೋದನಕಾರಿ ಸ್ಟೇಟಸ್ ಹಾಕಿದ್ದ ಆರೋಪದ ಮೇಲೆ ಆತನ ವಿರುದ್ಧ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಇದು ಕೋಮು ಸಂಘರ್ಷಕ್ಕೆ ಕಾರಣವಾಗಲಿದೆ ಎಂಬ ಹಿನ್ನಲೆಯಲ್ಲಿ ಆತನ ವಿರುದ್ಧ ಕೇಸ್ ದಾಖಲಿಸಿ ಬಂಧಿಸಿದ್ದಾರೆ.
ಆದರೆ ಅಮಾಯಕ ಹಿಂದೂ ಕಾರ್ಯಕರ್ತರನ್ನು ದಮನಿಸಲು ಸರ್ಕಾರ ಈ ಪಡೆಯನ್ನು ರಚಿಸಿದೆ ಎಂದು ಬಿಜೆಪಿ ಆರೋಪಿಸಿತ್ತು.