

ಮಂಗಳೂರು, ಸೆ 23: ಧರ್ಮಸ್ಥಳ ಬುರುಡೆ ಪ್ರಕರಣ ತನಿಖೆ ಹಾಗೂ ಪರ ವಿರೋಧ ಚರ್ಚೆಗಳು ಜೋರಾಗಿ ನಡೆಯುತ್ತಿದ್ದು, ಇದೀಗ ಸೌಜನ್ಯ ಪರ ಹೋರಾಟ ನಡೆಸುತ್ತಿರುವ ಸಾಮಾಜಿಕ ಹೋರಾಟಗಾರ ಮಹೇಶ್ ತಿಮರೋಡಿಯನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಗಡೀಪಾರು ಮಾಡಿ ದಕ್ಷಿಣ ಕನ್ನಡ ಜಿಲ್ಲಾ ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಆದೇಶಿಸಿದ್ದಾರೆ.
ಚಿನ್ನಯ್ಯ ಬಂಧನದ ಬಳಿಕ ಬುರುಡೆ ಪ್ರಕರಣ ಮಹತ್ವದ ತಿರುವು ಪಡೆದುಕೊಂಡಿತ್ತು. ಮಹೇಶ ಶೆಟ್ಟಿಯವರೇ ಇದರ ಸೂತ್ರಧಾರ ಎಂದು ಚಿನ್ನಯ್ಯ ಆರೋಪಿಸಿದ್ದ. ಈ ಎಲ್ಲಾ ಬೆಳವಣಿಗೆಯ ನಡುವೆ ಇದೀಗ ಮಹೇಶ್ ತಿಮರೋಡಿಯನ್ನು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಲಾಗಿದೆ ಎನ್ನುವ ಮಾಹಿತಿ ತಿಳಿದು ಬಂದಿದೆ. ಮಹೇಶ್ ತಿಮರೋಡಿ ಮೇಲೆ ಸಾಕಷ್ಟು ಹಳೆಯ ಪ್ರಕರಣಗಳು ಬಾಕಿ ಇರುವ ಹಿನ್ನಲೆಯಲ್ಲಿ ಪ್ರಕರಣ ಅವರನ್ನು ಗಡಿಪಾರು ಮಾಡುವಂತೆ ದ. ಕನ್ನಡ ಜಿಲ್ಲೆಯ ಸಹಾಯಕ ಆಯುಕ್ತರಾದ ಸ್ಟೆಲ್ಲಾ ವರ್ಗೀಸ್ ಅವರು ಈ ಆದೇಶವನ್ನು ಹೊರಡಿಸಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಸದ್ಯ ಎಲ್ಲಾ ಕಾನೂನು ಪ್ರಕ್ರಿಯೆ ನಡೆಯುತ್ತಿದ್ದು, ದ. ಕನ್ನಡ ಪೊಲೀಸರು ಮಹೇಶ್ ತಿಮರೋಡಿ ಕರೆದುಕೊಂಡು ಹೋಗಿ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಕರೆದೊಯ್ಯಲಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.


