ಹೆಬ್ರಿ: ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕ ನಾಡ್ಪಾಲು ಗ್ರಾಮದ ಕೂಡ್ಲು ವಿಕ್ರಮ್ ಗೌಡನನ್ನು ಎನ್’ಕೌಂಟರ್ ಮಾಡಿದ ಪೀತಬೈಲು ಪ್ರದೇಶದಲ್ಲಿ ಈಗ ನೀರವ ಮೌನ ಆವರಿಸಿದೆ.
ನ.18ರ ರಾತ್ರಿ ವಿಕ್ರಮ್ ಗೌಡ ಪೊಲೀಸರ ಗುಂಡಿಗೆ ಬಲಿಯಾದ ಸದಾ ಪೊಲೀಸರ ಬಂದೂಕಿನ ಗುಂಡಿನ ಮೊರೆತ,ಪೊಲೀಸ್ ವಾಹನಗಳ ಸದ್ದು ಮರೆಯಾಗಿ ಇದೀಗ ದಟ್ಟಾರಣ್ಯದ ಪೀತಬೈಲಿನ ಮನೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಮೌನ ಮಡುಗಟ್ಟಿದೆ.
ಗುಂಡಿನ ಚಕಮಕಿಯಿಂದ ಮನೆಯ ಸುತ್ತಲಿನ ಅಡಿಕೆ ಮರಗಳಿಗೆ ತಗುಲಿದ ಗುಂಡಿನ ಗುರುತು,ಮರಕ್ಕೆ ಸಿಕ್ಕಿಬಿದ್ದ ಗುಂಡಿನ ಕುರುಹು ಪತ್ತೆಯಾಗಿದೆ.ಇದಲ್ಲದೇ ಇಲ್ಲಿನ ಚಿತ್ರಣ ಗಮನಿಸಿದಾಗ ಮೇಲ್ನೋಟಕ್ಕೆ ಏಕಮುಖದಿಂದ ದಾಳಿ ನಡೆದಿರುವ ಸಾಧ್ಯತೆ ಕಂಡುಬಂದಿದೆ. ವಿಕ್ರಮ್ ಗೌಡ ಸುಸಜ್ಜಿತ ಶಸ್ತ್ರಾಸ್ತ್ರದ ಜತೆ ಬಂದಿದ್ದ, ಜಯಂತ ಗೌಡನ ಮನೆಯ ಅಂಗಳ ತಲುಪುವ ಮುನ್ನವೇ ಎಚ್ಚೆತ್ತ ಪೊಲೀಸರು ಶರಣಾಗತಿ ಸೂಚಿಸಿ ಇದಕ್ಕೆ ಜಗ್ಗದಿದ್ದಾಗ ಫೈರಿಂಗ್ ಮಾಡಿರುವ ಸಾದ್ಯತೆ ಕಂಡುಬಂದಿದ್ದು,ಗುಂಡೇಟು ತಿಂದ ವಿಕ್ರಮ್ ಗೌಡ ಜಯಂತ ಗೌಡನ ಮನೆಯ ಬಾಗಿಲ ಬಳಿಯೇ ಕುಸಿದು ಬಿದ್ದು ಪ್ರಾಣ ಬಿಟ್ಟಿರಬಹುದಾದ ಕುರುಹುಗಳಿವೆ.ಪೊಲೀಸರು ಮನೆಯೊಳಗಿನಿಂದ ಗುಂಡಿನ ಮಳೆಗರೆದ ಪರಿಣಾಮ ತುಳಸಿ ಕಟ್ಟೆಗೂ ಗುಂಡು ಸಿಡಿದಿರುವುದು ಪತ್ತೆಯಾಗಿದೆ. ವಿಕ್ರಮ್ ಗೌಡ ಗುಂಡಿಗೆ ಬಲಿಯಾದ ತಕ್ಷಣವೇ ಈತನ ಜತೆಗಿದ್ದ ಇತರೇ ನಕ್ಸಲರು ಪರಾರಿಯಾಗಿರುವ ಶಂಕೆಯೂ ವ್ಯಕ್ತವಾಗಿದೆ.
ವಿಕ್ರಮ್ ಗೌಡನ ಎನ್’ಕೌಂಟರ್ ನಡೆಯುವ ಮುನ್ನವೇ ಸ್ಥಳಾಂತರಗೊಂಡಿದ್ದ ಜಯಂತ ಗೌಡ ಕುಟುಂಬಕ್ಕೆ ಇದೀಗ ಆತಂಕ ಶುರುವಾಗಿದೆ.
ಅಂದು ಮನೆಯಿಂದ ಸ್ಥಳಾಂತರಿಸಿದ ಪೊಲೀಸರು ಇದೀಗ ಅದೇ ಕುಟುಂಬದ ಮುಖ್ಯಸ್ಥ ಜಯಂತ ಗೌಡನನ್ನು ಯಾವುದೇ ಮಾಹಿತಿ ನೀಡದೇ ವಿಚಾರಣೆಗೆಂದು ಪೊಲೀಸರು ಕರೆದೊಯ್ದಿದ್ದು ಮನೆಯವರ ಆತಂಕಕ್ಕೆ ಕಾರಣವಾಗಿದೆ.ಎನ್’ಕೌಂಟರ್ ಗೂ ಮುನ್ನ ಜಯಂತ ಗೌಡ ತನ್ನ ಕುಟುಂಬ ಕಬ್ಬಿನಾಲೆಯ ಪಳಂತಬೆಟ್ಟಿನ ತನ್ನ ಮಗಳ ಮನೆಯಲ್ಲಿ ವಾಸವಾಗಿದ್ದರು.ಇದೀಗ ಪೊಲೀಸರ ವಿಚಾರಣೆ ಆತಂಕ ಕುಟುಂಬವನ್ನು ಕಾಡಿದೆ. ನನ್ನ ಪತಿಗೆ ಮುಂಜಾನೆ ಪೊಲೀಸರು ಕರೆದುಕೊಂಡು ಹೋಗಿದ್ದು,ಕಿರುಕುಳ ನೀಡುತ್ತಾರೆ ಎನ್ನುವ ಭಯ ಮೂಡಿದೆ ಎಂದು ಜಯಂತ ಗೌಡ ಪತ್ನಿ ಗಿರಿಜಾ ಅಳಲು ತೋಡಿಕೊಂಡಿದ್ದಾರೆ. ಮಗನ ಕೈಗೆ ಬಿದ್ದು ಗಾಯವಾದ ಕಾರಣದಿಂದ ನಾವು ಕಳೆದ ಬುಧವಾರವೇ ಹೆಬ್ರಿಗೆ ಬಂದಿದ್ದೆವು.ಸೋಮವಾರ ಮನೆಗೆ ಮರಳುವಾಗ ನಮ್ಮನ್ನು ಪೊಲೀಸರು ತಡೆದರು ಹಾಗೂ ಎನ್’ಕೌಂಟರ್ ಆಗಿರುವ ವಿಷಯ ತಿಳಿಸಿ 10 ದಿನ ಮನೆಗೆ ಬರದಂತೆ ಪೊಲೀಸರು ಸೂಚನೆ ಕೊಟ್ಟರು ಎಂದು ಜಯಂತ ಗೌಡನ ಪತ್ನಿ ಗಿರಿಜಾ ಹೇಳಿದ್ದಾರೆ.
ಇತ್ತ ಜಯಂತ ಗೌಡನನ್ನು ಪೊಲೀಸರು ವಿಚಾರಣೆಗೆ ಕರೆದೊಯ್ದ ಸುದ್ದಿ ತಿಳಿದ ಮಲೆಕುಡಿಯ ಸಮುದಾಯದ ಮುಖಂಡರು ಹಾಗೂ ಸಂಬಂಧಿಕರು ಹೆಬ್ರಿ ಪೊಲೀಸ್ ಠಾಣೆಗೆ ಜಮಾಯಿಸಿ ಪೊಲೀಸರ ನಡೆಯ ವಿರುದ್ಧ ಆಕ್ರೋಶ ಹೊರಹಾಕಿದರು. ಬಳಿಕ ಪೊಲೀಸರು ಜಯಂತ ಗೌಡನನ್ನು ಬಿಟ್ಟು ಕಳುಹಿಸಿದ್ದಾರೆ
ಕಾರ್ಕಳ:ನಕ್ಸಲ್ ನಿಗ್ರಹ ಪಡೆಯ ಪೊಲೀಸರು ಕುಖ್ಯಾತ ನಕ್ಸಲ್ ವಿಕ್ರಂ ಗೌಡನನ್ನು ಎನ್’ಕೌಂಟರ್ ನಲ್ಲಿ ಹತ್ಯೆ ಮಾಡಿದ್ದಾರೆ. ಪೊಲೀಸರ ಕಾರ್ಯಶೈಲಿ ಶ್ಲಾಘನೀಯ. ಜೀವದ ಹಂಗು ತೊರೆದು ದೇಶ ವಿರೋಧಿ ಶಕ್ತಿಗಳನ್ನು ಯಾವುದೇ ಮುಲಾಜಿಗೆ ಒಳಗಾಗದೇ ಹತ್ತಿಕ್ಕಿದ ANF ಪೊಲೀಸರ ಕಾರ್ಯವೈಖರಿ ಅಭಿನಂದನೀಯ ಎಂದು ಕಾರ್ಕಳ ಶಾಸಕ ಹಾಗೂ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಹೇಳಿದ್ದಾರೆ.
ಆದರೆ ಈ ಘಟನೆಯ ಬಳಿಕ ಕೆಲವು ಪ್ರಶ್ನೆಗಳು ಉದ್ಭವಿಸಿವೆ. ರಾಜ್ಯದಲ್ಲಿ ಈ ಹಿಂದೆ ಸ್ಥಗಿತಗೊಂಡಿದ್ದ ನಕ್ಸಲ್ ಚಟುವಟಿಕೆ ಇದೀಗ ಹದಿನೈದು ವರ್ಷಗಳ ಬಳಿಕ ಮತ್ತೆ ಕಾಣಿಸಿಕೊಂಡಿದ್ದು,ನಕ್ಸಲರು ಬಹಿರಂಗವಾಗಿ ಕಾಣಿಸಿಕೊಳ್ಳುವುದಕ್ಕೆ ಕಾರಣವೇನು ? ಅಥವಾ ಕಾರಣ ಯಾರು ?
ರಾಜ್ಯ ಸರ್ಕಾರ, ಅದರಲ್ಲೂ ವಿಶೇಷವಾಗಿ ಸಿಎಂ ಸಿದ್ದರಾಮಯ್ಯ ಅವರು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನಗರ ನಕ್ಸಲರ ಬಗ್ಗೆ ತೋರುತ್ತಿರುವ ವಿಶೇಷ ಪ್ರೀತಿ ಇದಕ್ಕೆ ಪ್ರೇರಣೆಯಲ್ಲವೇ ?
ಸ್ಥಳೀಯ ಜನಪ್ರತಿನಿಧಿಗಳು ಅಭಿವೃದ್ಧಿ ವಿಚಾರದಲ್ಲಿ ತೋರಿದ ವಿಶೇಷ ಆಸಕ್ತಿಯಿಂದ ಸ್ಥಳೀಯರು ನಕ್ಸಲ್ ಸಿದ್ಧಾಂತವನ್ನು ತಿರಸ್ಕರಿಸಿದ್ದರು. ಸ್ಥಳೀಯರ ಬೆಂಬಲವಿಲ್ಲದೇ ಅಳಿದು ಹೋಗುವ ಹಂತಕ್ಕೆ ತಲುಪಿದ್ದ ನಕ್ಸಲ್ ಚಟುವಟಿಕೆ ಇದೀಗ ಕಾಂಗ್ರೆಸ್ ಸರ್ಕಾರ ಬರುತ್ತಿದ್ದಂತೆ ಮತ್ತೆ ತಲೆ ಎತ್ತಿದೆ.
ಸಿದ್ದರಾಮಯ್ಯನವರೇ ದೇಶವಿರೋಧಿ ಹಾಗೂ ಬುಡಮೇಲು ಕೃತ್ಯಕ್ಕೆ ನೆರವಾಗುವವರಿಗೆ ಆದರ್ಶದ ನೆಪದಲ್ಲಿ ಬೆಂಬಲ ರಕ್ಷಣೆ ಬೇಡ. ಇದು ಪಶ್ಚಿಮಘಟ್ಟ ಜನರ ಶಾಂತಿ- ನೆಮ್ಮದಿ ಕೆಡಿಸಲಿದೆ. ಹೀಗಾಗಿ ನಕ್ಸಲ್ ನಿಗ್ರಹ ಕಾರ್ಯಾಚರಣೆಯನ್ನು ಇನ್ನಷ್ಟು ಬಲಗೊಳಿಸಿ. ಎ ಎನ್ಎಫ್ ಗೆ ಹೆಚ್ಚಿನ ಸಿಬ್ಬಂದಿ ನಿಯೋಜಿಸಿ. ನಕ್ಸಲ್ ಚಟುವಟಿಕೆ ಹತ್ತಿಕ್ಕಿ ಜತೆಗೆ ಪಶ್ಚಿಮಘಟ್ಟ ಭಾಗದಲ್ಲಿ ಅಭಿವೃದ್ಧಿ ಕಾರ್ಯವನ್ನೂ ಚುರುಕುಗೊಳಿಸಬೇಕೆಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶಾಸಕ ಸುನಿಲ್ ಕುಮಾರ್ ಆಗ್ರಹಿಸಿದ್ದಾರೆ
ನವದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ನೆಲಸಮಗೊಳಿಸಿ ಅಲ್ಲೇ ಮಸೀದಿಯನ್ನು ಮತ್ತೆ ಕಟ್ಟುತ್ತೇವೆ ಎಂದು ಬಾಂಗ್ಲಾದೇಶಿ ಇಸ್ಲಾಮಿಸ್ಟ್ ಉಗ್ರ ಸಂಘಟನೆ ಪ್ರತಿಜ್ಞೆ ಮಾಡುವ ಮೂಲಕ ಭಾರತದ ವಿರುದ್ಧ ಬಹಿರಂಗ ಬೆದರಿಕೆ ಹಾಕಿದೆ.
ನಾವು ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಮಾಡಲು ಕೆಲಸ ಮಾಡುತ್ತಿದ್ದೇವೆ. ಇಸ್ಲಾಮಿಕ್ ಯುವಕರೇ, ನಿಮ್ಮ ಬಳಿ ಏನಿದೆಯೋ ಅದರೊಂದಿಗೆ ಸಿದ್ಧರಾಗಿರಿ, ಏಕೆಂದರೆ ಭಾರತದ ಮೇಲೆ ದಾಳಿ ಮಾಡಬೇಕು.ನಾವು ರಾಮ ಮಂದಿರವನ್ನು ನೆಲಸಮಗೊಳಿಸಿ ಮತ್ತೆ ಮಸೀದಿಯನ್ನು ನಿರ್ಮಿಸುತ್ತೇವೆ. ನರೇಂದ್ರ ಮೋದಿ ಅವರ ಎರಡೂ ಕೆನ್ನೆಗಳಿಗೆ ಶೂಗಳಿಂದ ಹೊಡೆಯುತ್ತೇನೆ. ಆಟವನ್ನು ಅವರೊಂದಿಗೆ ಆಡುತ್ತೇವೆ, ನಾವು ಸಿದ್ಧರಿದ್ದೇವೆ” ಎಂದು ತೀವ್ರಗಾಮಿ ಬಾಂಗ್ಲಾದೇಶಿ ಇಸ್ಲಾಮಿಸ್ಟ್ ವಿಡಿಯೋದಲ್ಲಿ ಘೋಷಿಸಿದ್ದಾನೆ.
ಬಾಂಗ್ಲಾದೇಶದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ, ವಿಶೇಷವಾಗಿ ಹಿಂದೂ ಸಮುದಾಯದ ಸುರಕ್ಷತೆಯ ಬಗ್ಗೆ ಹೆಚ್ಚುತ್ತಿರುವ ಕಳವಳಗಳ ಮಧ್ಯೆ ಈ ವೀಡಿಯೊ ಬಂದಿದೆ. ಇತ್ತೀಚಿನ ವಾರಗಳಲ್ಲಿ ಹಿಂದೂ ಮನೆಗಳು, ವ್ಯವಹಾರಗಳು ಮತ್ತು ಧಾರ್ಮಿಕ ಸ್ಥಳಗಳ ಮೇಲೆ ದಾಳಿಗಳು ಆತಂಕಕಾರಿಯಾಗಿ ಹೆಚ್ಚುತ್ತಿದ್ದು, ಮಾನವ ಹಕ್ಕುಗಳ ಸಂಘಟನೆಗಳಲ್ಲಿ ಎಚ್ಚರಿಕೆಯನ್ನು ಹೆಚ್ಚಿಸಿದೆ.