ಉತ್ತರಕನ್ನಡ: 2020ರ ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ಪ್ರಕರಣದ ಮೋಸ್ಟ್ ವಾಂಟೆಡ್ ಆರೋಪಿಯನ್ನು ಉತ್ತರ ಕನ್ನಡ ಜಿಲ್ಲೆ ಪೊಲೀಸರು ಬಂಧಿಸಿದ್ದಾರೆ. ಶಿರಸಿಯ ಟಿಪ್ಪು ನಗರ ನಿವಾಸಿ ಮೌಸೀನ್ ಅಲಿಯಾಸ್ ಇಮ್ತಿಯಾಝ್ ಶುಕುರ್ ಬಂಧಿತ ಆರೋಪಿ. ಆರೋಪಿ ಮೌಸೀನ್ ಪಿಎಫ್‌ಐ ಕಾರ್ಯಕರ್ತನಾಗಿದ್ದಲ್ಲದೇ ಉಗ್ರರಿಂದ ತರಬೇತಿ ಪಡೆದಿದ್ದನು. ಕೆಜಿ ಹಳ್ಳಿ-ಡಿಜಿ ಹಳ್ಳಿ ಗಲಭೆ ನಂತರ ಆರೋಪಿ ಮೌಸೀನ್ ತಲೆಮರೆಸಿಕೊಂಡಿದ್ದನು. ಮೌಸೀನ್ ಹೈದರಾಬಾದ್‌ಗೆ ತೆರಳಿ, ನಂತರ ಬಿಜಾಪುರ ಜಿಲ್ಲೆಯ ಸಿಂಧಗಿಯಲ್ಲಿ ನೆಲೆಸಿದ್ದನು.
ಅಲ್ಲದೇ ಅಂದಿನ ಪುಲಕೇಶಿನಗರದ ಶಾಸಕ ಅಖಂಡ ಶ್ರೀನಿವಾಸಮೂರ್ತಿಯವರ ಮನೆಗೂ ದುಷ್ಕರ್ಮಿಗಳು ಬೆಂಕಿ ಹಚ್ಚಿ ಲಕ್ಷಾಂತರ ಮೌಲ್ಯದ ಚಿನ್ನ, ವಸ್ತುಗಳನ್ನು ಕಳುವು ಮಾಡಲಾಗಿತ್ತು ಎಂದು ಆರೋಪಿಸಲಾಗಿತ್ತು. ಇನ್ನು ಈ ಪ್ರಕರಣದಲ್ಲಿ ಭಾಗಿಯಾದ ಹಲವರನ್ನು ಈಗಾಗಲೇ ಬಂಧಿಸಲಾಗಿದ್ದು, ಮೌಸೀನ್ ಶುಕುರ್ ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾಗಿದ್ದ.
ಈತನನ್ನು ಸೆರೆಹಿಡಿಯಲು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ್ ನೇತೃತ್ವದ ವಿಶೇಷ ತಂಡ ಕಾರ್ಯಾಚರಣೆಗೆ ಇಳಿದಿತ್ತು. ಆರೋಪಿ ಮೌಸೀನ್ ಸಿಂಧಗಿಯಲ್ಲಿರುವ ಮಾಹಿತಿ ತಿಳಿದ ಪೊಲೀಸರು, ಕೂಡಲೇ ಕಾರ್ಯಪ್ರವೃತ್ತರಾಗಿ ಆತನನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಹಿಂದೆ ಉಗ್ರ ಚಟುವಟಿಕೆ ಸಂಬಂಧಿಸಿ ಶಿರಸಿಯಲ್ಲಿ ಎನ್ಐಎಯಿಂದ ಬಂಧಿತನಾಗಿದ್ದ ಸಾದಿಕ್, ಆರೋಪಿ ಮೌಸೀನ್ನನ್ನು ಟ್ರೇನ್ ಮಾಡಿದ್ದನು. ಈ ಮೌಸಿಕ್ ಶಿರಸಿಯಲ್ಲಿ ಈ ಹಿಂದಿನ ಸೆಕ್ಷನ್ 302 ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. ಕೊನೆಗೂ, ಮೋಸ್ಟ್ ವಾಂಟೆಡ್ ಮೌಸೀನ್ ಶುಕುರ್ ಪೊಲೀಸರ ಅತಿಥಿಯಾಗಿದ್ದಾನೆ.