ಕಾರ್ಕಳ: ರಸ್ತೆಯಲ್ಲಿದ್ದ ಹಂಪ್ಸ್ ಗಮನಿಸದೆ ಬೈಕ್ ಸ್ಕಿಡ್ ಆಗಿ ಬಿದ್ದು ಗಾಯಗೊಂಡಿದ್ದ ಬೈಕ್ ಸವಾರ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.ಬೈಕ್ ಸವಾರ ಪವಿತ್ (22) ಮೃತಪಟ್ಟ ಯುವಕ.
ಪವಿತ್ ಫೆ.15 ರಂದು ಬೈಕಿನಲ್ಲಿ ಶುಭಂ ಎಂಬಾತನೊAದಿಗೆ ಕಲ್ಯಾದಿಂದ ಬೆಳ್ಮಣ್ ಮಾರ್ಗವಾಗಿ ಮಂಗಳೂರಿಗೆ ಹೋಗುತ್ತಿದ್ದಾಗ ಬೆಳ್ಮಣ್ ಚರ್ಚ್ ಬಳಿ ರಾತ್ರಿ ವೇಳೆ ರಸ್ತೆಯಲ್ಲಿ ಹಂಪ್ಸ್ ಇದ್ದುದನ್ನು ಗಮನಿಸದೇ ಬೈಕ್ ಚಲಾಯಿಸಿದ ಪರಿಣಾಮ ಬೈಕ್ ಸ್ಕಿಡ್ ಆಗಿ ಇಬ್ಬರೂ ರಸ್ತೆಗೆ ಬಿದ್ದು ಗಾಯಗೊಂಡಿದ್ದರು. ಆ ಪೈಕಿ ಪವಿತ್ ನ ಕೈ ಮೂಳೆ ಮುರಿದು ಹೊಟ್ಟೆಯ ಒಳಭಾಗಕ್ಕೆ ಬಲವಾದ ಪೆಟ್ಟು ಬಿದ್ದಿತ್ತು. ಸಹಸವಾರ ಶುಭಂನ ಕಾಲಿನ ಮೂಳೆಗೆ ಗಂಭೀರ ಗಾಯವಾಗಿತ್ತು.
ಇಬ್ಬರನ್ನೂ ಚಿಕಿತ್ಸೆಗಾಗಿ ಎ.ಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಪವಿತ್‌ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಅತ್ತಾವರ ಕೆ.ಎಂ.ಸಿ ಗೆ ದಾಖಲಿಸಲಾಗಿತ್ತು. ಆದರೆ ಹೊಟ್ಟೆಗೆ ಬಲವಾಗಿ ಏಟಾಗಿದ್ದ ಕಾರಣ ಪವಿತ್ ಚಿಕಿತ್ಸೆ ಫಲಿಸದೆ ಮಾ.7 ರಂದು ಮೃತಪಟ್ಟಿದ್ದಾನೆ.
ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

K