
ಕರಾವಳಿನ್ಯೂಸ್ ವಿಶೇಷ ವರದಿ
ಈ ಬಾರಿ ಮಂಗಾರು ಮಳೆ ತಡವಾದರೂ ಭರ್ಜರಿ ಎಂಟ್ರಿ ಕೊಟ್ಟಿದ್ದು, ಮಳೆಯಿಂದಾಗಿ ಪ್ರಮುಖವಾಗಿ ಕಾರ್ಕಳದ ನಗರದ ರಸ್ತೆಗಳು ಈಗಾಗಲೇ ಗುಂಡಿಬಿದ್ದು ವಾಹನ ಸವಾರರಿಗೆ ಸಂಚಾರವೇ ಸವಾಲಾಗಿ ಪರಿಣಮಿಸಿದೆ. ಹದಗೆಟ್ಟ ರಸ್ತೆಗಳ ದುರವಸ್ಥೆ ವಿರುದ್ಧ ಜನರು ಪ್ರತಿಭಟನೆ ನಡೆಸುತ್ತಿದ್ದು ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ರಾಜಕೀಯ ಪಕ್ಷಗಳು ಗುಂಡಿಬಿದ್ದ ರಸ್ತೆಯನ್ನು ದುರಸ್ತಿ ಮಾಡುವ ಬದಲು ರಾಜಕೀಯವಾಗಿ ಮೈಲೇಜ್ ಪಡೆಯಲು ಇದನ್ನೇ ಅಸ್ತçವಾಗಿ ಬಳಸಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗುತ್ತಿದ್ದಾರೆ.
ಕಾರ್ಕಳ ಪುರಸಭೆ ವ್ಯಾಪ್ತಿಯೊಳಗಿನ ಪೆರ್ಪಾಜೆ,ಕಲ್ಲೊಟ್ಟೆ, ಆನೆಕೆರೆ, ಅನಂತಶಯನ, ತೆಳ್ಳಾರು ರಸ್ತೆಗಳು ಸೇರಿದಂತೆ ಪ್ರಮುಖ ಸಂಪರ್ಕ ರಸ್ತೆಗಳು ಅಲ್ಲಲ್ಲಿ ಗುಂಡಿಬಿದ್ದು ವಾಹನ ಸವಾರರು ಸರ್ಕಸ್ ಮಾಡಿ ವಾಹನ ಚಲಾಯಿಸಿದರೆ ಈ ಭಾಗದಲ್ಲಿ ನಡೆದುಕೊಂಡು ಹೋಗುವವರಿಗೆ ಉಚಿತ ಕೆಸರು ನೀರಿನ ಅಭಿಷೇಕ ಖಚಿತ. ಜನರು ಆಡಳಿತ ವ್ಯವಸ್ಥೆಗೆ ಹಿಡಿಶಾಪ ಹಾಕುತ್ತಿದ್ದರೆ , ಕಾಂಗ್ರೆಸ್ ಹಾಗೂ ಬಿಜೆಪಿ ರಸ್ತೆ ಗುಂಡಿ ವಿಚಾರದಲ್ಲಿ ಪರಸ್ಪರ ಮಾತಿನ ಕೆಸರರೆಚಾಟಕ್ಕೆ ಇಳಿದಿವೆ. ರಸ್ತೆ ದುರಸ್ತಿಗೆ ಶಾಸಕರು ಅನುದಾನವೇ ತರುತ್ತಿಲ್ಲ ಇದು ಶಾಸಕರ ವೈಫಲ್ಯ ಎಂದು ಹೊಂಡಗಳಿಗೆ ಬಾಳೆಗಿಡ ನೆಟ್ಟು ಪ್ರತಿಭಟನೆ ನಡೆಸಿದರೆ, ರಸ್ತೆ ದುರಸ್ತಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಹಣ ಬಿಡುಗಡೆ ಮಾಡುತ್ತಿಲ್ಲ, ಅನುದಾನವಿಲ್ಲದೇ ರಸ್ತೆ ದುರಸ್ತಿ ಸಾಧ್ಯವೇ ಎಂದು ಕಾಂಗ್ರೆಸ್ ಪ್ರತಿಭಟನೆಗೆ ಪ್ರತಿಯಾಗಿ ಕೌಂಟರ್ ಹೇಳಿಕೆಗಳನ್ನು ಕೊಡುತ್ತಿದ್ದಾರೆ.
ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರೇ ನಿಮ್ಮ ರಾಜಕೀಯ ಪ್ರೇರಿತ ಕೌಂಟರ್ ಗಳು ಏನೇ ಇರಲಿ, ಅದರಿಂದ ಜನರಿಗೆ ಯಾವ ಲಾಭವೂ ಇಲ್ಲ, ನಷ್ಟವೂ ಇಲ್ಲ. ನಿಮಗೆ ಕಾರ್ಕಳದ ಜನರ ಬಗ್ಗೆ ನಿಜವಾದ ಕಾಳಜಿ ಹಾಗೂ ಅನುಕಂಪ ಇದ್ದರೆ ಮೊದಲು ಆರೋಪ ಪ್ರತ್ಯಾರೋಪ ಬಿಡಿ, ಗುಂಡಿಬಿದ್ದ ರಸ್ತೆಗಳನ್ನು ಮಳೆಗಾಲ ಆದ್ದರಿಂದ ತಾತ್ಕಾಲಿಕವಾಗಿ ಆದರೂ ಗುಂಡಿಮುಚ್ಚುವ ಕೆಲಸ ಮಾಡಿ. ಅದುಬಿಟ್ಟು ರಾಜಕೀಯ ಲಾಭಕ್ಕಾಗಿ ಜನರ ಹಿತವನ್ನು ಬಲಿ ಕೊಡಬೇಡಿ.



.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
