
ಕಾರ್ಕಳ,ಏ.28: ಪಡುಬಿದ್ರೆಯ ಐತಿಹಾಸಿಕ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿಯನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಪೂರೈಸಿ, ಅದ್ಭುತ ಕಾಷ್ಟ ಶಿಲ್ಪದ ಸೌಂದರ್ಯವನ್ನು ಅನಾವರಣಗೊಳಿಸಿದ ‘ಎಸ್‌ಕೆಎಸ್ ಇನ್ಫ್ರಾ’ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸುಜಯ್ ಕುಮಾರ್ ಶೆಟ್ಟಿ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಹಾಗೂ ಎಂ.ಆರ್.ಜೆ ಸಮೂಹ ಸಂಸ್ಥೆಗಳ ಮುಖ್ಯಸ್ಥ ಕೆ. ಪ್ರಕಾಶ್ ಶೆಟ್ಟಿ ಅವರು ಸುಜಯ್ ಕುಮಾರ್ ಶೆಟ್ಟಿ ಅವರ ಶ್ರದ್ಧೆ ಮತ್ತು ವೃತ್ತಿಪರತೆಯನ್ನು ಶ್ಲಾಘಿಸಿ ಗೌರವಿಸಿ ಸನ್ಮಾನಿಸಿದರು.
ಬೃಹತ್ ದೇಗುಲಗಳ ನಿರ್ಮಾಣಕ್ಕೆ ವರ್ಷಗಳ ಕಾಲಾವಕಾಶ ಬೇಕಾಗುತ್ತದೆ. ಆದರೆ ಅತೀ ಕಡಿಮೆ ಅವಧಿಯಲ್ಲಿ ಅತ್ಯದ್ಭುತ ಶಿಲ್ಪಕಲೆಯ ದೇವಸ್ಥಾನವನ್ನು ನಿರ್ಮಿಸಿರುವುದು ನಿಜಕ್ಕೂ ಶ್ಲಾಘನೀಯ. ದೇಗುಲದ ಪ್ರತಿಯೊಂದು ಕೆತ್ತನೆಯೂ ಪ್ರಾಚೀನ ಶಿಲ್ಪಕಲೆಯ ಸೊಬಗನ್ನು ಮರುಸೃಷ್ಟಿಸಿದಂತಿದ್ದು, ಸುಜಯ್ ಶೆಟ್ಟಿ ನೇತೃತ್ವದ ತಂಡ ಹಗಲಿರುಳು ಶ್ರಮಿಸಿ, ಕೇವಲ 11 ತಿಂಗಳಲ್ಲಿ ಭವ್ಯವಾದ ದೇವಸ್ಥಾನವನ್ನು ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಪದಾಧಿಕಾರಿಗಳು, ಬ್ರಹ್ಮಕಲಶೋತ್ಸವ ಸಮಿತಿಯ ಪ್ರಮುಖರು ಹಾಗೂ ಊರಿನ ಗಣ್ಯರು ಉಪಸ್ಥಿತರಿದ್ದರು.
ಕಾಪು ಹೊಸ ಮಾರಿಗುಡಿ ಹಾಗೂ ಕಾರ್ಕಳದ ಪಾರಂಪರಿಕ ಶೈಲಿಯ ನ್ಯಾಯಾಲಯದ ಕಟ್ಟಡ ನಿರ್ಮಾಣದ ಮೂಲಕ ಈಗಾಗಲೇ ರಾಷ್ಟ್ರಮಟ್ಟದ ಗಮನ ಸೆಳೆದಿರುವ ಸುಜಯ ಶೆಟ್ಟಿ ಅವರು ವೃತ್ತಿಯಲ್ಲಿನ ಪ್ರಾಮಾಣಿಕತೆ ಹಾಗೂ ಕಾರ್ಮಿಕರ ಕಲ್ಯಾಣಕ್ಕೆ ನೀಡುವ ಆದ್ಯತೆಯಿಂದಾಗಿ ಭರವಸೆಯ ಗುತ್ತಿಗೆದಾರರಾಗಿ ಗುರುತಿಸಿಕೊಂಡಿದ್ದಾರೆ. ಈ ಹಿಂದೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿದ್ದ ಅಬ್ದುಲ್ ನಜೀರ್ ಅವರೂ ಸುಜಯ್ ಶೆಟ್ಟಿ ಕಾರ್ಯವೈಖರಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದನ್ನು ಇಲ್ಲಿ ಸ್ಮರಿಸಬಹುದು.


.
.
.
.
.
.
.
.
.
.
.
.
.
.
.
.
.
.
.
.
