

ಕಾರ್ಕಳ,ನ.25: ಕಾರ್ಕಳದ ಪ್ರತಿಷ್ಠಿತ ಖಾಸಗಿ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಇದೇ ಬರುವ ಡಿಸೆಂಬರ್ 2 ರಿಂದ 5 ರವರೆಗೆ ನಡೆಯಲಿದೆ ಎಂದು ಕ್ರಿಯೇಟಿವ್ ಸಂಸ್ಥೆಯ ಸಹ ಸಂಸ್ಥಾಪಕ ಅಶ್ವತ್ ಎಸ್. ಎಲ್.ರವರು ತಿಳಿಸಿದ್ದಾರೆ.
ಅವರು ಕಾರ್ಕಳ ಪತ್ರಿಕಾ ಭವನದಲ್ಲಿ ನ.25 ರಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಈ ಬಾರಿಯ ಕ್ರಿಯೇಟಿವ್ ಅವಿರ್ಭವ ಕಾರ್ಯಕ್ರಮವು ಭೂಮಿ, ಬಣ್ಣ. ಬದುಕು ಎಂಬ ವಿಶಿಷ್ಟ ಪರಿಕಲ್ಪನೆಯಡಿ ನಡೆಯಲಿದೆ.
ನಾಲ್ಕು ದಿನಗಳವರೆಗೆ ನಿರಂತರವಾಗಿ ಸಾಗುವ ಈ ಕಾರ್ಯಕ್ರಮದ ವೇದಿಕೆಯಲ್ಲಿ ಖ್ಯಾತ ಚಲನಚಿತ್ರ ಗೀತರಚನೆಕಾರ ವಿ.ನಾಗೇಂದ್ರ ಪ್ರಸಾದ್, ಖ್ಯಾತ ಉದ್ಯಮಿ ಶಶಿಧರ ಶೆಟ್ಟಿ, ಸಂಪತ್ ಶೆಟ್ಟಿ, ಆದರ್ಶ ಆಸ್ಪತ್ರೆ ಉಡುಪಿಯ ವೈದ್ಯಕೀಯ ನಿರ್ದೇಶಕ ಡಾ. ಜಿ.ಎಸ್. ಚಂದ್ರಶೇಖರ್ ಪಿ, ಕರ್ನಾಟಕ ವಿಧಾನ ಪರಿಷತ್ ಸದಸ್ಯ ಎಸ್ ಎಲ್. ಭೋಜೇಗೌಡ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡುಬಿದಿರೆಯ ಮ್ಯಾನೆಜಿಂಗ್ ಟ್ರಸ್ಟಿ ವಿವೇಕ್ ಆಳ್ವ, ಖ್ಯಾತ ಸಾಹಿತಿ ಹಾಗೂ ವಿಮರ್ಶಕರಾದ ಡಾ.ಬಿ ಜನಾರ್ಧನ ಭಟ್ ಹಾಗೂ ಡಾ.ಎನ್. ತಿರುಮಲೇಶ್ವರ ಭಟ್ ಮುಂತಾದ ಗಣ್ಯರು ವೇದಿಕೆಯನ್ನು ಅಲಂಕರಿಸಲಿದ್ದಾರೆ.
ನ.2 ರಂದು ವಿದ್ಯಾರ್ಥಿ ಕಲಾವಿದರು ಮತ್ತು ಹವ್ಯಾಸಿ ಕಲಾವಿದರಿಂದ ಕ್ರಿಯೇಟಿವ್ ಯಕ್ಷಾರಾಧನಂ, ನ. 03 ರಂದು, ಅಂಕುಶ್ ಎನ್ ನಾಯಕ್ ಅವರ ಸಾರಥ್ಯದಲ್ಲಿ ಕ್ರಿಯೇಟಿವ್ ಸ್ಮರ ಸಂಗಮ ಕಾರ್ಯಕ್ರಮ ನಡೆಯಲಿದೆ.ಈ ಕಾರ್ಯಕ್ರಮದಲ್ಲಿ ದೇಶದ ಹೆಸರಾಂತ ಕಲಾವಿದರಿಂದ ನಡೆಯುವ ಭೈರವ್ ಫ್ಯೂಷನ್ ಸಂಗೀತ ಕಾರ್ಯಕ್ರಮದಲ್ಲಿ ಸಿದ್ಧಾರ್ಥ ಬೆಳ್ಳಣ್ಣು ಸೇರಿದಂತೆ ನಾಡಿನ ಖ್ಯಾತ ಕಲಾವಿದರು ಭಾಗವಹಿಸಲಿದ್ದಾರೆ. ನ. 04 ರಂದು ಡಾ. ವಿದ್ಯಾಭೂಷಣ ರವರ ಆತ್ಮಕಥನ MEMORY IS MUSIC ಪುಸ್ತಕ ಬಿಡುಗಡೆಗೊಳ್ಳಲಿದೆ ನಂತರ ಡಾ. ವಿದ್ಯಾಭೂಷಣ ಮತ್ತು ಅವರ ಪುತ್ರಿ ಕುಮಾರಿ ಮೇಧಾ ವಿದ್ಯಾಭೂಷಣರವರಿಂದ ಭಕ್ತಿ ಲಹರಿ ಕಾರ್ಯಕ್ರಮ ನಡೆಯಲಿದೆ ಹಾಗೂ ಅದೇ ದಿನ ಮಧ್ಯಾಹ್ನ 2.30 ಕ್ಕೆ ಕ್ರಿಯೇಟಿವ್ ಪ್ರತಿಭಾ ಪುರಸ್ಕಾರ ಮತ್ತು ಕ್ರಿಯೇಟಿವ್ ಗ್ಲೋಬಲ್ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕಿ ಆಸ್ಮಾ ಬಾನು, ಕ್ರಿಯೇಟಿವ್ ನ ಹೆಮ್ಮೆಯ ಹಳೆಯ ವಿದ್ಯಾರ್ಥಿ ಸಾಧಕ ಅಭಯ್ ಎಸ್ ಎಸ್ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ನ.05ರಂದು ನಡೆಯುವ ಕ್ರಿಯೇಟಿವ್ ಸಾಹಿತ್ಯ ಸಾಂಗತ್ಯ ಕಾರ್ಯಕ್ರಮದಲ್ಲಿ ಖ್ಯಾತ ಚಲನಚಿತ್ರ ಗೀತರಚನೆಕಾರ ವಿ.ನಾಗೇಂದ್ರ ಪ್ರಸಾದ್ ಹಾಡುಗಳ ಹಿನ್ನಲೆಯ ಸಂವಾದದ ಜೊತೆ ಖ್ಯಾತ ಗಾಯಕರಿಂದ ಹಾಡುಗಾರಿಕೆ ನಡೆಯಲಿದೆ. ಕ್ರಿಯೇಟಿವ್ ಕಾಲೇಜಿನಲ್ಲಿ ವಿದ್ಯಾಭ್ಯಾಸವನ್ನು ಮಾಡಿ ಕಳೆದ ಬಾರಿ ಉತ್ತೀರ್ಣರಾಗಿ NEET, JEE ಮುಂತಾದ ಪರೀಕ್ಷೆಗಳಲ್ಲಿ ವಿಶಿಷ್ಟ ಸಾಧನೆಗೈದು ದೇಶದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿರುವ ಸುಮಾರು 400 ಕ್ಕಿಂತ ಅಧಿಕ ಮಂದಿ ವಿದ್ಯಾರ್ಥಿಗಳಿಗೆ ವಿಶೇಷವಾದ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಈ ಎಲ್ಲಾ ಕಾರ್ಯಕ್ರಮಕ್ಕೆ ವಿದ್ಯಾಭಿಮಾನಿಗಳು,ಸಾರ್ವಜನಿಕರು, ಕಲಾ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಅಶ್ವತ್ ಎಸ್.ಎಲ್. ರವರು ವಿನಂತಿಸಿಕೊಂಡಿದ್ದಾರೆ.






.
.
.
.
.
.
.
.
.
.
.
.
.
.
.
.
.
.
.
.
