
ಬೆಂಗಳೂರು,ಫೆ.10: ತಾಯಿ ಮತ್ತು ದೊಡ್ಡಮ್ಮನ ಖಾಸಗಿ ಚಿತ್ರಗಳನ್ನು ಮಗಳೇ ತನ್ನ ಪ್ರಿಯತಮನಿಗೆ ಕಳುಹಿಸಿದ ಶಾಕಿಂಗ್ ಪ್ರಕರಣ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.ಮಗಳು ತನ್ನ ಖಾಸಗಿ ಮತ್ತು ತನ್ನ ಸಹೋದರಿಯ ನಗ್ನ ಚಿತ್ರಗಳನ್ನು ವರುಣ್ ಅಲಿಯಾಸ್ ಗಿರಿಧರ್ ಎಂಬ ವ್ಯಕ್ತಿಗೆ ಕಳುಹಿಸಿದ್ದಾಳೆ. ಇದು ಆನ್ಲೈನ್ ಶೋಷಣೆ ಮತ್ತು ವೈಯಕ್ತಿಕ ಡೇಟಾದ ದುರುಪಯೋಗದ ಭಯವನ್ನು ಹುಟ್ಟುಹಾಕಿದೆ ಎಂದು ಆರೋಪಿಸಿ 49 ವರ್ಷದ ಮಹಿಳೆಯೊಬ್ಬರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ಕಳೆದ 25 ವರ್ಷಗಳಿಂದ ಬೆಂಗಳೂರಿನ ಮೈಸೂರು ರಸ್ತೆಯಲ್ಲಿ ಕುಟುಂಬ ನೆಲೆಸಿದ್ದು ದಂಪತಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಹಿರಿಯ ಮಗಳು ಬಿಬಿಎ ಓದಿದ್ದು ನಿರುದ್ಯೋಗಿಯಾಗಿದ್ದಾಳೆ. ಕಿರಿಯ ಮಗಳು ತನ್ನ ಅಧ್ಯಯನ ಮಾಡುತ್ತಿದ್ದು ತಂದೆ ಅಡುಗೆ ಕೆಲಸ ಮಾಡುತ್ತಿದ್ದಾರೆ.
ಒಂದು ವರ್ಷದ ಹಿಂದೆ ಹಿರಿಯ ಮಗಳು ಶೈಕ್ಷಣಿಕ ಮತ್ತು ವೃತ್ತಿಯ ಉದ್ದೇಶಕ್ಕಾಗಿ ಸ್ಮಾರ್ಟ್ಫೋನ್ ಬೇಕೆಂದು ತಂದೆಯ ಬಳಿ ಕೇಳಿಕೊಂಡಿದ್ದಾಳೆ. ತಂದೆ ಮಗಳ ಕೋರಿಕೆಯಂತೆ ಸ್ಮಾರ್ಟ್ಫೋನ್ ತೆಗೆಸಿಕೊಟ್ಟಿದ್ದಾರೆ.
ಒಂದೂವರೆ ತಿಂಗಳ ಹಿಂದೆ ಮನೆ ಕೆಲಸ ಮಾಡುತ್ತಿದ್ದಾಗ ತಾಯಿ ಮಗಳಿದ್ದ ಕೋಣೆಗೆ ಹೋದಾಗ ಮಗಳು ವಿಡಿಯೋ ಕರೆಯಲ್ಲಿ ಯುವಕನ ಜೊತೆಗೆ ಮಾತನಾಡುತ್ತಿದ್ದಳು. ತಾಯಿ ಬರುತ್ತಿದ್ದಂತೆ ಮಗಳು ಕರೆಯನ್ನು ದಿಢೀರ್ ಕಡಿತ ಮಾಡಿದ್ದಾಳೆ. ಇದರಿಂದ ಅನುಮಾನಗೊಂಡ ತಾಯಿ, ಫೋನಿನಲ್ಲಿ ಮಾತನಾಡಿದ್ದು ಯಾರ ಜೊತೆಗೆ ಎಂದು ಪ್ರಶ್ನಿಸಿದಾಗ ಮಗಳು ಸರಿಯಾಗಿ ಉತ್ತರ ನೀಡಲಿಲ್ಲ. ಈ ವಿಚಾರ ಕೇಳಿದ್ದಕ್ಕೆ ರೇಗಾಡುತ್ತಿದ್ದ ಹಿನ್ನೆಲೆಯಲ್ಲಿ ಪೋಷಕರು ಆಪ್ತ ಸಂಬಂಧಿಕರ ಮೂಲಕ ಸತ್ಯ ಹೊರತೆಗೆಯುವ ಪ್ರಯತ್ನ ಮಾಡಿದ್ದರೂ ಆಕೆ ಬಾಯಿಬಿಟ್ಟಿರಲಿಲ್ಲ. ಆದರೂ ಹಲವು ಪ್ರಯತ್ನಗಳ ಬಳಿಕ ಮನವೊಲಿಕೆ ಮಾಡಿದ ನಂತರ ಆಕೆಯ ಫೋನ್ ಪಾಸ್ವರ್ಡ್ ಪಡೆಯಲು ಯಶಸ್ವಿಯಾಗಿದ್ದಾರೆ.
ಪಾಸ್ವರ್ಡ್ ಹಾಕಿ ಫೋನಿನ ಫೋಟೋ ಗ್ಯಾಲರಿ ನೋಡಿದ ಪೋಷಕರು, ಸಂಬಂಧಿಕರು ನಿಜಕ್ಕೂ ಶಾಕ್ ಆಗಿದ್ದಾರೆ. ತಾಯಿ ಮಲಗಿದ್ದಾಗ ತೆಗೆದ ಖಾಸಗಿ ಫೋಟೋ, ತಾಯಿಯ ಹಿರಿಯ ಸಹೋದರಿ ಮನೆಯಲ್ಲಿ ಸ್ನಾನ ಮಾಡುತ್ತಿದ್ದಾಗ ಅವರ ನಗ್ನ ಫೋಟೋಗಳು, ವಿಡಿಯೋಗಳು ಮೊಬೈಲಿನಲ್ಲಿ ಇರುವುದನ್ನು ನೋಡಿದ್ದಾರೆ. ಅಷ್ಟೇ ಅಲ್ಲದೇ ಆ ಫೋಟೋಗಳನ್ನು ಆಕೆ ಪ್ರಿಯಕರನಿಗೆ ಕಳುಹಿಸಿದ್ದನ್ನು ನೋಡಿ ಬೆಚ್ಚಿಬಿದ್ದಿದ್ದಾರೆ.
ಗೆಳೆಯ ವರುಣ್ ಜೊತೆಗಿನ ಚಾಟ್ನಲ್ಲಿ ಯುವತಿಯೇ ತನ್ನ ಖಾಸಗಿ ಫೋಟೋಗಳನ್ನು ಆತನಿಗೆ ಕಳುಹಿಸಿದ್ದಳು. ಚಾಟ್ ಪರಿಶೀಲನೆ ಮಾಡುವಾಗ ನಿನ್ನ ಮತ್ತು ಕುಟುಂಬದವರ ಖಾಸಗಿ ಚಿತ್ರಗಳನ್ನು ಕಳುಹಿಸುವಂತೆ ವರುಣ್ ಮೆಸೇಜ್ ಮಾಡಿರುವುದು ಗಮನಕ್ಕೆ ಬಂದಿದೆ.
ಚಾಟ್ ನೋಡಿ ಆತಂಕಕ್ಕೆ ಒಳಗಾದ ಕುಟುಂಬ ಯುವತಿಗೆ ವರುಣ್ ಜೊತೆ ಮಾತನಾಡದಂತೆ ಸೂಚಿಸಿದ್ದಾರೆ. ಪೋಷಕರು ಎಚ್ಚರಿಕೆ ನೀಡಿದ್ದರೂ ಪುತ್ರಿ ವರುಣ್ ವಿಚಾರದಲ್ಲಿ ಪ್ರತಿನಿತ್ಯ ಗಲಾಟೆ ಮಾಡುತ್ತಿದ್ದಳು. ಒಂದು ವಾರದ ಹಿಂದೆ ಪುತ್ರಿ ನಾನು ಮದುವೆಯಾದರೆ ವರುಣ್ನನ್ನೇ ಆಗುತ್ತೇನೆ ಎಂದು ಪೋಷಕರಿಗೆ ಹೇಳಿ ಮನೆಯನ್ನೇ ತೊರೆದಿದ್ದಾಳೆ.
ವರುಣ್ ಯಾರು? ಏನು ಮಾಡುತ್ತಿದ್ದಾನೆ? ಎಲ್ಲಿ ನೆಲೆಸಿದ್ದಾನೆ ಎಂಬ ಮಾಹಿತಿ ಇಲ್ಲದ ಕಾರಣ ಪುತ್ರಿಯ ಸುರಕ್ಷತೆಗಾಗಿ ಪೋಷಕರು ಈಗ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ವರುಣ್ ಖಾಸಗಿ ಫೋಟೋ, ವಿಡಿಯೋಗಳನ್ನು ಬೇರೆಯವರಿಗೆ ಕಳುಹಿಸಿರುವ ಸಾಧ್ಯತೆಯಿದೆ. ಪೋಷಕರ ಆರೋಪಗಳನ್ನು ಪರಿಶೀಲಿಸಲಾಗುತ್ತಿದೆ ಮತ್ತು ವರುಣ್ ಪತ್ತೆಹಚ್ಚಲು ಪ್ರಯತ್ನಗಳು ನಡೆಯುತ್ತಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

.
.
.
.
.
.
.
.
.
.
