ಹುಬ್ಬಳ್ಳಿ: ರಾಜ್ಯ ಸರ್ಕಾರದ ಸೂಚನೆಯ ಮೇರೆಗೇ ರೈತರ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಿಸಲಾಗಿದೆ ಎಂದು ಜಂಟಿ ಸಂಸದೀಯ ಸಮಿತಿಯ ಅಧ್ಯಕ್ಷ ಜಗದಾಂಬಿಕಾ ಪಾಲ್ ಗಂಭೀರವಾಗಿ ಆರೋಪಿಸಿದ್ದಾರೆ.
ವಕ್ಫ್ ತಿದ್ದುಪಡಿ ಕಾಯ್ದೆಗೆ ಸಂಬAಧಿಸಿದ ಜಂಟಿ ಸಂಸದೀಯ ಸಮಿತಿಯ ಅಧ್ಯಕ್ಷ ಜಗದಾಂಬಿಕಾ ಪಾಲ್ ಇಂದು ಅವರು ಹುಬ್ಬಳ್ಳಿಗೆ ಭೇಟಿ ನೀಡಿ ರೈತರ ಅಹವಾಲು ಆಲಿಸಿ ಮಾತನಾಡಿ, ಆಡಳಿತ ವ್ಯವಸ್ಥೆಯ ಕೈವಾಡ ಇಲ್ಲದೆ ಇದೆಲ್ಲ ಆಗಲು ಸಾಧ್ಯವಿಲ್ಲ. ರಾಜ್ಯ ಸರ್ಕಾರ ಸೂಚನೆಯಂತೆ ವಕ್ಫ್ ಆಸ್ತಿ ಎಂದು ಘೋಷಿಸಲಾಗಿದೆ. ಈಗ ರೈತರಿಗೆ ಕೊಟ್ಟ ನೋಟಿಸ್ ಹಿಂಪಡೆಯುವುದಾಗಿ ಹೇಳಿದ್ದಾರೆ. ರಾಜ್ಯ ಸರ್ಕಾರದ ಕೈವಾಡ ಇಲ್ಲದೆ ಆಸ್ತಿ ಕಬಳಿಸಲು ಸಾಧ್ಯವಿಲ್ಲ. ಇದು ಅತ್ಯಂತ ಗಂಭೀರವಾದ ವಿಚಾರ ಎಂದು ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರೈತರ ಜಮೀನು, ದೇಗುಲ, ಪಾರಂಪರಿಕ ತಾಣಗಳ ದಾಖಲೆಗಳಲ್ಲಿ ವಕ್ಫ್ ಆಸ್ತಿ ಎಂದು ನಮೂದಿಸಲಾಗಿದೆ. 10-15 ರೈತರ ನಿಯೋಗ ಮನವಿ ಸಲ್ಲಿಸುವ ನಿರೀಕ್ಷೆ ಇತ್ತು. ಆದರೆ, 70ಕ್ಕೂ ಹೆಚ್ಚು ಅಹವಾಲು ಬಂದಿದೆ ಎಂದರು.
ಕರ್ನಾಟಕದಲ್ಲಿ ವಕ್ಫ್ ವಿವಾದ ತಿವ್ರಗೊಳ್ಳುತ್ತಿದ್ದಂತೆಯೇ ಸಂಸದ ತೇಜಸ್ವಿ ಸೂರ್ಯ ಕೆಲವು ದಿನಗಳ ಹಿಂದೆ ಆ ಬಗ್ಗೆ ಜಗದಾಂಬಿಕಾ ಪಾಲ್ಗೆ ಪತ್ರ ಬರೆದಿದ್ದರು. ಸಮಿತಿಯ ಮುಂದೆ ಸಾಕ್ಷಿಗಳಾಗಿ ಕರ್ನಾಟಕದ ರೈತರ ನಿಯೋಗವನ್ನು ಆಹ್ವಾನಿಸಬೇಕೆಂದು ಮನವಿ ಮಾಡಿದ್ದರು. ಇದೀಗ ಅವರ ಮನವಿಯನ್ನು ಪುರಸ್ಕರಿಸಿರುವ ಸಂಸದೀಯ ಸಮಿತಿಯ ಅಧ್ಯಕ್ಷರೇ ಸ್ವತಃ ರಾಜ್ಯಕ್ಕೆ ಆಗಮಿಸಿ ರೈತರ ಅಹವಾಲು ಆಲಿಸುತ್ತಿದ್ದಾರೆ.