
ಬೆಂಗಳೂರು,ಆ.08: ಖಾಸಗಿ ಅನುದಾನರಹಿತ ಶಾಲೆಗಳು ತಾವು ನಿಗದಿಪಡಿಸಿರುವ ಶುಲ್ಕದ ವಿವರಗಳನ್ನು ಸಾರ್ವಜನಿಕರು ಹಾಗೂ ಪೋಷಕರಿಗೆ ತಿಳಿಯುವಂತೆ ಕಡ್ಡಾಯವಾಗಿ ಸೂಚನಾ ಫಲಕದಲ್ಲಿ ಪ್ರಕಟಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.
ಶಿಕ್ಷಣ ಹಕ್ಕು ಕಾಯಿದೆ-2009 ಮತ್ತು ಕರ್ನಾಟಕ ಕಡ್ಡಾಯ ಮತ್ತು ಉಚಿತ ಪ್ರಾಥಮಿಕ ಶಿಕ್ಷಣ ಹಕ್ಕು ನಿಯಮಗಳು-2012ರ ಅಡಿಯಲ್ಲಿ ಈ ಸೂಚನೆ ನೀಡಲಾಗಿದ್ದು, ದಾಖಲಾತಿ ಹಾಗೂ ಶುಲ್ಕ ವಸೂಲಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಇಲಾಖೆ ಖಡಕ್ ಸೂಚನೆ ನೀಡಿದೆ.
ಎಲ್ಲಾ ಖಾಸಗಿ ಶಾಲೆಗಳು ತಾವು ನಿಗದಿಪಡಿಸಿದ ಶುಲ್ಕದ ವಿವರಗಳನ್ನು ತಮ್ಮ ಶಾಲಾ ಜಾಲತಾಣ ಶಾಲಾ ಸೂಚನಾ ಫಲಕ ಹಾಗೂ ಶಿಕ್ಷಣ ಇಲಾಖೆಯ SATS ಜಾಲತಾಣದಲ್ಲಿ ಸಾರ್ವಜನಿಕರು ಮತ್ತು ಪೋಷಕರಿಗೆ ಲಭ್ಯವಾಗುವಂತೆ ಕಡ್ಡಾಯವಾಗಿ ಪ್ರಕಟಿಸಬೇಕು.
ಶಾಲೆಗಳು ನಿಗದಿಪಡಿಸಿದ ಶುಲ್ಕವನ್ನು ಹೊರತುಪಡಿಸಿ ಕ್ಯಾಪಿಟೇಷನ್ ಫೀ ಅಥವಾ ಯಾವುದೇ ರೀತಿಯ ದೇಣಿಗೆ ಅಥವಾ ಹೆಚ್ಚಿನ ಶುಲ್ಕವನ್ನು ವಸೂಲಿ ಮಾಡುವಂತಿಲ್ಲ.
ಶೈಕ್ಷಣಿಕ ವರ್ಷದಲ್ಲಿ ದಾಖಲಾತಿ ಸಮಯದಲ್ಲಿ ವಿದ್ಯಾರ್ಥಿ ಅಥವಾ ಹೆತ್ತವರನ್ನು ಯಾವುದೇ ರೀತಿಯ ಸ್ಕ್ರೀನಿಂಗ್/ಪರೀಕ್ಷಾ ಪ್ರಕ್ರಿಯೆಗೆ ಒಳಪಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಹೆಚ್ಚುವರಿ ಶುಲ್ಕ ಅಥವಾ ದೇಣಿಗೆ ಪಡೆದರೆ ವಸೂಲಿ ಮಾಡಿದ ಕ್ಯಾಪಿಟೇಷನ್ ಫೀಗಿಂತ 10 ಪಟ್ಟು ಹೆಚ್ಚಿನ ದಂಡ ವಿಧಿಸಲಾಗುವುದು. ಮೊದಲ ಬಾರಿಯ ಉಲ್ಲಂಘನೆಗೆ 25 ಸಾವಿರ ದಂಡ ಹಾಗೂ ನಂತರದ ಪ್ರತಿಯೊಂದು ಉಲ್ಲಂಘನೆಗೆ ₹
50 ಸಾವಿರದವರೆಗೆ ದಂಡ ವಿಧಿಸಲಾಗುವುದು.
ಖಾಸಗಿ ಶಾಲೆಗಳು ಈ ಕಾಯಿದೆಯ ನಿಯಮಗಳನ್ನು ಉಲ್ಲಂಘಿಸಿರುವ ಬಗ್ಗೆ ದೂರುಗಳು ಬಂದಲ್ಲಿ, ಸಂಬಂಧಪಟ್ಟ DDPI ಹಾಗೂ BEO ಅಂತಹ ಶಾಲೆಗಳ ವಿರುದ್ಧ ತಕ್ಷಣವೇ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತ ವಿಕಾಸ್ ಕಿಶೋರ್ ಸುರಾಲ್ಕರ್ ಅವರು ಸ್ಪಷ್ಟ ನಿರ್ದೇಶನ ನೀಡಿದ್ದಾರೆ.





.
.
.
.
.
.
.
.
.
.
.
.
.
.
.
.
.
.
.
.
