

ಬೆಂಗಳೂರು,ಸೆ.19: ರಾಜ್ಯದಲ್ಲಿ ಮುಂದಿನ 24 ಗಂಟೆಗಳಲ್ಲಿ ವ್ಯಾಪಕವಾಗಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ವರದಿ ತಿಳಿಸಿದೆ. ಸೆಪ್ಟೆಂಬರ್ 20ರ ಬೆಳಿಗ್ಗೆ 8 ಗಂಟೆಯವರೆಗಿನ ಮುನ್ಸೂಚನೆಯಂತೆ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವೆಡೆ ಮಳೆಯ ಅಬ್ಬರ ಇರಲಿದ್ದು, ಸೆಪ್ಟೆಂಬರ್ 22ರಿಂದ ರಾಜ್ಯಾದ್ಯಂತ ಮಳೆಯ ಪ್ರಮಾಣ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.
ದಕ್ಷಿಣ ಕನ್ನಡ, ಕಾಸರಗೋಡು ಹಾಗೂ ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ಪ್ರದೇಶಗಳಲ್ಲಿ ಮಧ್ಯಾಹ್ನದ ಬಳಿಕ ಗುಡುಗು ಸಹಿತ ಮಳೆಯಾಗಲಿದೆ. ಕರಾವಳಿಯಲ್ಲಿ ಸೆಪ್ಟೆಂಬರ್ 22ರಿಂದ ಮಳೆ ಮತ್ತಷ್ಟು ಬಿರುಸುಗೊಳ್ಳಲಿದೆ. ಇತ್ತ ಮಲೆನಾಡಿನ ಕೊಡಗು, ಹಾಸನದ ಸಕಲೇಶಪುರ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಸಂಜೆ ವೇಳೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದ್ದು, ಸೆಪ್ಟೆಂಬರ್ 22ರಿಂದ 25ರವರೆಗೆ ಮೂರು ದಿನಗಳ ಕಾಲ ಮಳೆ ಹೆಚ್ಚಾಗುವ ಲಕ್ಷಣಗಳಿವೆ.
ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ವಿಜಯಪುರ, ಕಲಬುರ್ಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಹಾಗೂ ಬೀದರ್ ಜಿಲ್ಲೆಗಳಲ್ಲಿ ಮಧ್ಯಾಹ್ನ ನಂತರ ಗುಡುಗು ಸಹಿತ ಉತ್ತಮ ಮಳೆಯಾಗುವ ಮುನ್ಸೂಚನೆ ಇದೆ. ಹಾವೇರಿ, ಗದಗ ಹಾಗೂ ಬಾಗಲಕೋಟೆಯಲ್ಲಿ ಸಾಧಾರಣ ಮಳೆಯಾಗಲಿದ್ದು, ಸೆಪ್ಟೆಂಬರ್ 23 ಅಥವಾ 24ರವರೆಗೆ ಈ ಭಾಗದಲ್ಲಿ ಮಳೆ ಮುಂದುವರಿಯಲಿದೆ.
ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ರಾಮನಗರ, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ದಾವಣಗೆರೆ ಹಾಗೂ ವಿಜಯನಗರ ಜಿಲ್ಲೆಗಳ ಹಲವೆಡೆ ಸಂಜೆ ಮತ್ತು ರಾತ್ರಿ ವೇಳೆಗೆ ಗುಡುಗು ಸಹಿತ ಮಳೆಯಾಗಲಿದ್ದು, ಸೆಪ್ಟೆಂಬರ್ 25ರ ತನಕ ಮಳೆಯ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ:
ಮ್ಯಾನ್ಮಾರ್ನ ಪಶ್ಚಿಮ ಕರಾವಳಿಯಲ್ಲಿ ಸೃಷ್ಟಿಯಾಗಿರುವ ವಾಯುಭಾರ ಕುಸಿತವು ಸೆಪ್ಟೆಂಬರ್ 22ರ ವೇಳೆಗೆ ಚಂಡಮಾರುತವಾಗಿ ಪರಿವರ್ತನೆಗೊಳ್ಳುವ ಸಾಧ್ಯತೆಯಿದೆ. ಇದು ಸೆಪ್ಟೆಂಬರ್ 24ರ ರಾತ್ರಿ ಆಂಧ್ರಪ್ರದೇಶ-ಒಡಿಶಾ ಗಡಿ ಭಾಗದಲ್ಲಿ ಭೂಪ್ರದೇಶ ಪ್ರವೇಶಿಸಿ, ಸೆಪ್ಟೆಂಬರ್ 27ರ ಸುಮಾರಿಗೆ ಮಹಾರಾಷ್ಟ್ರದವರೆಗೆ ಸಾಗಿ ದುರ್ಬಲಗೊಳ್ಳುವ ಸಾಧ್ಯತೆಗಳಿವೆ. ಮತ್ತೊಂದೆಡೆ ಗುಜರಾತ್-ಮಹಾರಾಷ್ಟ್ರ ಗಡಿಯಲ್ಲಿ ಸಣ್ಣ ಸುಳಿಗಾಳಿ ಉಂಟಾಗಿದ್ದರೂ, ಶುಷ್ಕ ಗಾಳಿಯ ಪರಿಣಾಮದಿಂದಾಗಿ ಅಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇಲ್ಲವೆಂದು ಹವಾಮಾನ ಇಲಾಖೆ ತಿಳಿಸಿದೆ.





.
.
.
.
.
.
.
.
.
.
.
.
.
.
.
.
.
.
.
.
