ಕಾರ್ಕಳ: ಅಪಾರ್ಟ್‌ಮೆಂಟ್ ನಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಮಹಿಳೆಯೊಬ್ಬರು ಗಾಯಗೊಂಡ ಅಘಾತಕಾರಿ ಘಟನೆ ಕಾರ್ಕಳದ ಪುಲ್ಕೇರಿ ಬೈಪಾಸ್ ಬಳಿಯ ಅಪಾರ್ಟ್‌ಮೆಂಟ್ ಒಂದರಲ್ಲಿ ಶನಿವಾರ ತಡರಾತ್ರಿ ಸಂಭವಿಸಿದೆ.
ಅಡುಗೆ ಮನೆಯ ಹೊರಗಡೆಯ ಲಾಂಜ್ ನಲ್ಲಿ ಇರಿಸಲಾಗಿದ್ದ ಹೊಸ ಗ್ಯಾಸ್ ಸಿಲಿಂಡರ್ ಏಕಾಎಕಿ ಸ್ಪೋಟಗೊಂಡ ಪರಿಣಾಮ ಅಡುಗೆ ಮನೆ ಛಿದ್ರವಾಗಿದ್ದು, ಸುತ್ತಮುತ್ತಲಿನ ಅಪಾರ್ಟ್‌ಮೆಂಟಿನ ಮನೆಗಳಿಗೂ ಬೆಂಕಿ ಹರಡಿದ್ದು,ಸ್ಪೋಟದ ತೀವ್ರತೆಗೆ ಅಕ್ಕಪಕ್ಕದ ಮನೆಯ ಕಿಟಕಿ ಬಾಗಿಲುಗಳಿಗೆ ಹಾನಿಯಾಗಿದೆ.
ಪುಢ್ ಬಾಸ್ಕೆಟ್ ಸೂಪರ್ ಮಾರ್ಕೆಟ್ ನ ನಾಲ್ಕನೇ ಮಹಡಿಯಲ್ಲಿ ಶನಿವಾರ ರಾತ್ರಿ11.30 ಸುಮಾರಿಗೆ ಈ ದುರಂತ ಸಂಭವಿಸಿದ್ದು, ಸ್ಪೋಟದಿಂದ ಮಹಿಳೆಗೆ ಗಾಯಗಳಾಗಿದ್ದು ಸಿಲಿಂಡರ್ ಛಿದ್ರಗೊಂಡಿದೆ. ಈ ಸ್ಪೋಟಕ್ಕೆ ಸಿಲಿಂಡರ್ ನಲ್ಲಿ ಸಣ್ಣ ಪ್ರಮಾಣದ ಗ್ಯಾಸ್ ಸೋರಿಕೆಯೇ ಕಾರಣ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಕಾರ್ಕಳ ಅಗ್ನಿ ಶಾಮಕದಳದ ಸಿಬ್ಬಂದಿಗಳು ಧಾವಿಸಿ ಕಟ್ಟಡಕ್ಕೆ ವ್ಯಾಪಿಸಿದ್ದ ಬೆಂಕಿ ನಂದಿಸಿ,ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ. ಸ್ಥಳೀಯರು ಗಾಯಾಳು ಮಹಿಳೆಯನ್ನು ಕೆಳಗಿಸಿ ಆಸ್ಪತ್ರೆಗೆ ಸಾಗಿಸಲು ನೆರವಾದರು.
ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಆಲ್ಬರ್ಟ್ ಮೋನಿಸ್,ಸಿಬ್ಬಂದಿಗಳಾದ ಅಚ್ಯುತ್ ಕರ್ಕೇರಾ, ಸುರೇಶ್ ಕುಮಾರ್, ಜಯ ಮೂಲ್ಯ, ನಿತ್ಯಾನಂದ, ರವಿಚಂದ್ರ ಭಾಗವಹಿಸಿದ್ದರು.
`