ಬೆಂಗಳೂರು: ಕೌಶಲಯುಕ್ತ ಮತ್ತು ಕೌಶಲ್ಯ ರಹಿತ ಕಾರ್ಮಿಕರ ಕನಿಷ್ಠ ವೇತನ ಹೆಚ್ಚಳಕ್ಕೆ ಸರ್ಕಾರ ಮುಂದಾಗಿದ್ದು, ಮುಂದಿನ ಒಂದೆರಡು ವಾರಗಳ ಒಳಗೆ ಅಧಿಸೂಚನೆ ಹೊರಡಿಸುವ ನಿರೀಕ್ಷೆ ಇದೆ. ಒಂದು ವೇಳೆ, ಕರಡು ಪ್ರಸ್ತಾವನೆಯಲ್ಲಿ ಉಲ್ಲೇಖಿಸಿದಷ್ಟೇ ಪ್ರಮಾಣದಲ್ಲಿ ಕನಿಷ್ಠ ವೇತನ ಹೆಚ್ಚಳ ಮಾಡಿದ್ದೇ ಆದಲ್ಲಿ, ಕಾರ್ಮಿಕರಿಗೆ ದೇಶದಲ್ಲಿಯೇ ಅತಿ ಹೆಚ್ಚು ಕನಿಷ್ಠ ವೇತನ ನೀಡುವ ರಾಜ್ಯ ಎಂದು ಕರ್ನಾಟಕ ಗುರುತಿಸಿಕೊಳ್ಳಲಿದೆ. ಒಟ್ಟು 82 ವಿವಿಧ ಕೆಲಸಗಳಿಗೆ ಕಾರ್ಮಿಕರ ಕನಿಷ್ಠ ವೇತನ ಅನ್ವಯವಾಗಲಿದೆ.
ಕರಡು ಅಧಿಸೂಚನೆಯನ್ನು ಕರ್ನಾಟಕ ಕನಿಷ್ಠ ವೇತನ ಸಲಹಾ ಮಂಡಳಿಗೆ ಕಳುಹಿಸಿ ಮಂಡಳಿಯು ಅನುಮೋದನೆ ನೀಡಿದ್ದೇ ಆದಲ್ಲಿ ಮುಂದಿನ ಒಂದೆರಡು ವಾರಗಳಲ್ಲಿ ಸರ್ಕಾರ ಅಧಿವೇಶನ ಹೊರಡಿಸುವ ನಿರೀಕ್ಷೆ ಇದೆ ಎಂದು ಸುದ್ದಿ ಸಂಸ್ಥೆಯೊAದು ವರದಿ ಮಾಡಿದೆ. ವೇತನ ಪರಿಷ್ಕರಣೆಯಿಂದ ಸಂಘಟಿತ ಮತ್ತು ಅಸಂಘಟಿತ ವಲಯಗಳ ಕಾರ್ಮಿಕರಿಗೆ ಪ್ರಯೋಜನವಾಗಲಿದೆ.ರಾಜ್ಯದಲ್ಲಿ ಸಂಘಟಿತ ಮತ್ತು ಅಸಂಘಟಿತ ಸೇರಿದಂತೆ ವಿವಿಧ ವಲಯಗಳ ಸುಮಾರು 1.7 ಕೋಟಿ ಕಾರ್ಮಿಕರಿದ್ದು, ್ಲ ಕೌಶಲ ಸಹಿತ ಮತ್ತು ಕೌಶಲರಹಿತ ಕಾರ್ಮಿಕರ ಕನಿಷ್ಠ ವೇತನ ತಿಂಗಳಿಗೆ 12,000 ಇದೆ. ಪರಿಷ್ಕೃತ ಲೆಕ್ಕಾಚಾರದ ಪ್ರಕಾರ ಇದು 20,000 ರೂಪಾಯಿಗೆ ಹೆಚ್ಚಾಗಲಿದೆ.
ಕನಿಷ್ಠ ವೇತನ ಕಡಿಮೆ ಇರಬೇಕೆಂದು ಉದ್ಯೋಗದಾತರು ಬಯಸಿದ್ದರು ನಾವು ಎಲ್ಲರ ಹಿತಾಸಕ್ತಿಯನ್ನು ಪರಿಗಣಿಸುತ್ತೇವೆ ಎಂದು ಕಾರ್ಮಿಕ ಇಲಾಖೆ ಮೂಲಗಳು ತಿಳಿಸಿವೆ. ಮತ್ತೊಂದೆಡೆ ಕನಿಷ್ಠ ವೇತನವನ್ನು ತಿಂಗಳಿಗೆ 35000 ರೂಪಾಯಿಗೆ ಹೆಚ್ಚಿಸಬೇಕೆಂದು ಕಾರ್ಮಿಕ ಸಂಘಟನೆಗಳು ಆಗ್ರಹಿಸಿವೆ.