
ಉಡುಪಿ, ಮಾ.28: ಬಿರು ಬೇಸಿಗೆಯಲ್ಲಿ ಕುಡಿಯುವ ನೀರು ಹಾಗೂ ಕೃಷಿ ಬಳಕೆಗೆ ಬೋರ್ ವೆಲ್ ಯಂತ್ರಗಳಿಗೆ ಹೆಚ್ಚಿನ ಬೇಡಿಕೆಯಿದೆ. ಆದರೆ ಇತ್ತೀಚಿನ ದಿನಗಳಲ್ಲಿ ರಿಗ್ ಯಂತ್ರಗಳ ಕಾರ್ಬನ್ ಡ್ರಿಲ್ಲಿಂಗ್ ಬಿಟ್ ಗಳ ಬೆಲೆಯಲ್ಲಿ ಗಣನೀಯ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ರಿಗ್ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದು, ಬೆಲೆ ಇಳಿಸದಿದ್ದಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದೆ.
ಕಳೆದ ಎರಡು ತಿಂಗಳ ಹಿಂದೆ 20 ಸಾವಿರ ಬೆಲೆಯ ಡ್ರಿಲ್ಲಿಂಗ್ ಬಿಟ್ಗಳ ದರವನ್ನು ಬರೋಬ್ಬರಿ 70 ಸಾವಿರಕ್ಕೆ ಏರಿಸಲಾಗಿದೆ. ಈ ಬೆಲೆ ಏರಿಕೆಯನ್ನು ಭರಿಸಲು ಸಣ್ಣ ಮತ್ತು ಮಧ್ಯಮ ರಿಗ್ ಮಾಲೀಕರಿಗೆ ಅಸಾಧ್ಯವಾಗಿದೆ.ದರ ಏರಿಕೆ ಜೊತೆಗೆ ಬಿಟ್ ಗಳ ಕಳಪೆ ಗುಣಮಟ್ಟದಿಂದ 70 ಸಾವಿರ ಮೌಲ್ಯದ ಬಿಟ್ ಕೇವಲ 2,500 ಅಡಿ ಮಾತ್ರ ಕೊರೆಯಲು ಸಾಧ್ಯ. ಹಳೆಯ ಬಿಟ್ಗಳು ಹೆಚ್ಚು ಬಾಳಿಕೆ ಬರುತ್ತಿದ್ದು ಆದರೆ ಈಗಿನ ಬಿಟ್ಗಳ ಬಾಳಿಕೆ ಕಡಿಮೆಯಾಗಿರುವುದು ಮಾಲೀಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ, ಭಾರತವು ಕಾರ್ಬನ್ ಬಿಟ್ಗಳಿಗಾಗಿ ಚೀನಾ ದೇಶದ ಮೇಲೆ ಅವಲಂಬಿತವಾಗಿರುವುದೇ ಈ ಬೆಲೆ ಏರಿಕೆಗೆ ಮೂಲ ಕಾರಣವಾಗಿದೆ, ಆದ್ದರಿಂದ ಆತ್ಮನಿರ್ಭರ ಭಾರತ ಯೋಜನೆಯಡಿ ನಮ್ಮ ದೇಶದಲ್ಲೇ ಉತ್ತಮ ಗುಣಮಟ್ಟದ ಬಿಟ್ಗಳನ್ನು ತಯಾರಿಸಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ರಿಗ್ ಮಾಲೀಕರ ಆಗ್ರಹವಾಗಿದೆ. ಡ್ರಿಲ್ಲಿಂಗ್ ಬಿಟ್ ಬೆಲೆ ಹೆಚ್ಚಳದಿಂದ
ರಿಗ್ಗಳ ಮೇಲೆ ಲಕ್ಷಾಂತರ ರೂಪಾಯಿ ಸಾಲ ಪಡೆದಿರುವ ಮಾಲೀಕರು ಈಗ ಬಿಡಿಭಾಗಗಳಿಗೂ ಹಣ ಹೊಂದಿಸಲು ಪರದಾಡುತ್ತಿದ್ದಾರೆ. ಇದೇ ಪರಿಸ್ಥಿತಿ ಮುಂದುವರೆದರೆ ರಿಗ್ಗಳನ್ನು ನಂಬಿರುವ ಸಾವಿರಾರು ಕಾರ್ಮಿಕರು ಬೀದಿ ಪಾಲಾಗುವ ಭೀತಿ ಎದುರಾಗಿದೆ.
ಬಿಡಿಭಾಗಗಳ ಬೆಲೆ ಹೆಚ್ಚಾದಂತೆ ಬೋರ್ವೆಲ್ ಕೊರೆಯುವ ದರವನ್ನು ಅನಿವಾರ್ಯವಾಗಿ ಹೆಚ್ಚಿಸಬೇಕಾಗುತ್ತದೆ. ಇದು ನೇರವಾಗಿ ಬಡ ರೈತರ ಮೇಲೆ ಆರ್ಥಿಕ ಬರೆ ಬೀಳಲಿದೆ.
ಆದ್ದರಿಂದ ಪ್ರಧಾನಮಂತ್ರಿಯವರು ಈ ವಿಷಯದಲ್ಲಿ ಮಧ್ಯಪ್ರವೇಶಿಸಿ, ಬೆಲೆ ನಿಯಂತ್ರಣಕ್ಕೆ ದರ ಸಮಿತಿಯನ್ನು ರಚಿಸಬೇಕು.ಸತತ ನಷ್ಟದಿಂದ ನೊಂದಿರುವ ರಿಗ್ ಮಾಲೀಕರಿಗೆ ಬ್ಯಾಂಕ್ ಸಾಲ ಮರುಪಾವತಿಯಲ್ಲಿ ವಿನಾಯಿತಿ ಅಥವಾ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಬೇಕು.
ಬೋರ್ವೆಲ್ ರಿಗ್ ಮಾಲೀಕರು ಮತ್ತು ಅವರ ಕುಟುಂಬದ ಭವಿಷ್ಯವನ್ನು ಉಳಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡಲೇ ಸ್ಪಂದಿಸದಿದ್ದರೆ, ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ
ರಿಗ್ ಮಾಲೀಕರು ಎಚ್ಚರಿಸಿದ್ದಾರೆ.















.
.
.
.
.
.
.
.
.
.
