
ಕಾರ್ಕಳ: `ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ’ ಎನ್ನುವ ರಾಮಾಯಣದ ಶ್ಲೋಕದಂತೆ ಹೆತ್ತ ತಾಯಿ ಹಾಗೂ ಜನ್ಮಭೂಮಿ ಇವೆರಡು ಸ್ವರ್ಗಕ್ಕಿಂತಲೂ ಶ್ರೇಷ್ಠ ಎನ್ನುವ ಮಾತಿದೆ. ಇದನ್ನು ತನ್ನ ಬದುಕಿನಲ್ಲಿ ಯಥಾವತ್ತಾಗಿ ಅಳವಡಿಸಿಕೊಂಡವರು ಶಿಕ್ಷಣ ಸಂತ ಅಜೆಕಾರಿನ ಡಾ.ಸುಧಾಕರ ಶೆಟ್ಟಿಯವರು. ಸ್ವರ್ಗಸ್ಥರಾಗಿರುವ ತನ್ನ ತಾಯಿ ಪದ್ಮ ಶೆಟ್ಟಿಯವರ ನೂರನೇ ವರ್ಷದ ಹುಟ್ಟು ಹಬ್ಬದ ಸವಿನೆನಪಿಗಾಗಿ ತಾನು ಹುಟ್ಟಿ ಬೆಳೆದ ಊರು ಅಜೆಕಾರಿನಲ್ಲಿ, ತಂದೆ ತಾಯಿಯವರು ಕಂಡ ಕನಸಿನಂತೆ ತನ್ನೂರಿನ ಬಡ ಮಕ್ಕಳ ಜ್ಞಾನದ ಹಸಿವು ನೀಗಿಸಲು ಜ್ಞಾನಸುಧಾ ಎನ್ನುವ ಭವ್ಯವಾದ ಜ್ಞಾನ ದೇಗುಲವನ್ನು ನಿರ್ಮಿಸಿದ್ದಾರೆ. 9ನೇ ತರಗತಿಯಿಂದ 12ನೇ ತರಗತಿಯವರೆಗೆ ಗುಣಮಟ್ಟದ ಹಾಗೂ ಮೌಲ್ಯಾಧಾರಿತ ಶಿಕ್ಷಣ ನೀಡುವ ಗುರಿಯೊಂದಿಗೆ ಹಾಗೂ ಮರ್ಣೆ ಗ್ರಾಮದ ಪ್ರತಿಭಾನ್ವಿತ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಗುರಿಯ ಜೊತೆಗೆ ಅಜೆಕಾರಿನ ಸುಂದರವಾದ ಪ್ರಕೃತಿಯ ನಡುವೆ ನಿರ್ಮಾಣಗೊಂಡ ಜ್ಞಾನಸುಧಾ ಶಿಕ್ಷಣ ಸಂಸ್ಥೆಯು ಅಮ್ಮನ ಹುಟ್ಟಿದ ದಿನ ಏ.14ರಂದು ಭವ್ಯವಾದ ಜ್ಞಾನ ದೇಗುಲ ಲೋಕಾರ್ಪಣೆಯಾಗಲಿದೆ. ಮಾತ್ರವಲ್ಲದೇ ಸಮಾಜಕ್ಕೆ ಜ್ಞಾನದ ಬೆಳಕಿನ ಜೊತೆಗೆ ಆಧ್ಯಾತ್ಮಿಕ ಚಿಂತನೆಯನ್ನು ಪಸರಿಸುವ ನಿಟ್ಟಿನಲ್ಲಿ ಶಾಲೆಯ ಕ್ಯಾಂಪಸ್ ಗೆ ಹೊಂದಿಕೊAಡು ಸುಂದರವಾದ ಮಹಾಗಣಪತಿ ದೇವಸ್ಥಾನದ ಪ್ರತಿಷ್ಠಾಪನೆ ಹಾಗೂ ಬ್ರಹ್ಮಕಲಶೋತ್ಸವವು ಏ 12 ರಂದು ನಡೆಯಲಿದೆ. ಪೂರ್ವಭಾವಿಯಾಗಿ ಏ.10ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಗಣಿತಶಾಸ್ತçದಲ್ಲಿ ಡಾಕ್ಟರೇಟ್ ಪದವಿ ಪಡೆದ ಡಾ.ಸುಧಾಕರ ಶೆಟ್ಟಿಯವರು (ಎಂ.ಎಸ್ಸಿ., ಪಿಎಚ್ ಡಿ) ಆಳ್ವಾಸ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸುಧೀರ್ಘ ಸೇವೆ ಸಲ್ಲಿಸಿನ ತನ್ನೂರಿನ ಮಕ್ಕಳಿಗೆ ತನ್ನ ವಿದ್ಯೆಯನ್ನು ಧಾರೆ ಎರೆಯಬೇಕೆನ್ನುವ ಮಹದಾಸೆಯಿಂದ ತಂದೆತಾಯಿಯವರ ಹೆಸರಿನಲ್ಲಿ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಸ್ಥಾಪಿಸಿ 2011ರಲ್ಲಿ ಕಾರ್ಕಳದ ಕುಕ್ಕುಂದೂರಿನ ಗಣಿತನಗರದಲ್ಲಿ ಜ್ಞಾನಸುಧಾ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿದ್ದರು. ಕಳೆದ 15 ವರ್ಷಗಳ ಹಿಂದೆ ಮೌಲ್ಯಾಧಾರಿತ ಶಿಕ್ಷಣವನ್ನು ನೀಡಿದ್ದ ಸುಧಾಕರ ಶೆಟ್ಟಿಯವರು ಬಾಲ್ಯದಲ್ಲಿ ಬಡತನದ ಬೇಗೆಯಲ್ಲೇ ಬೆಳೆದವರು. ವೃತ್ತಿ ಜೀವನದ ಅನುಭವ ಪಡೆದು ನೂರಾರು ಸವಾಲಿನ ನಡುವೆ ಶಿಕ್ಷಣ ಸಂಸ್ಥೆಯನ್ನು ಕಟ್ಟಿಬೆಳೆಸಿದ ಡಾ.ಸುಧಾಕರ ಶೆಟ್ಟಿಯವರು ಇಂದು ಯಶಸ್ಸಿನ ಉತ್ತುಂಗಕ್ಕೇರಿದ್ದರೂ ಇಂದಿಗೂ ಕೂಡ ಯಾವುದೇ ಹಮ್ಮು ಬಿಮ್ಮು, ಗತ್ತು, ಗೈರತ್ತು ಇಲ್ಲದ ಜನಸಾಮಾನ್ಯರ ವಿದ್ಯಾರ್ಥಿಗಳ ಗಣಿತ ಮೇಷ್ಟ್ರು. ಸಮಾಜಕ್ಕೆ ಸಾವಿರಾರು ವೈದ್ಯರು, ಇಂಜಿನಿಯರ್ ಗಳನ್ನು ಕೊಟ್ಟಿರುವ ಜ್ಞಾನ ಸುಧಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷರ ಸರಳ ಗುಣ ನಡತೆ, ಬಡವ ಬಲ್ಲಿದ ಎನ್ನುವ ಬೇಧಭಾವ ಇಲ್ಲದೇ ಬೆರೆಯುವ ಗುಣ ಎಲ್ಲರಿಗೂ ಅಚ್ಚುಮೆಚ್ಚು.ಒಂದರ್ಥದಲ್ಲಿ ಹೇಳಿದರೆ ಡೌನ್ ಟು ಅರ್ಥ್ ಎಂದರೂ ತಪ್ಪಾಗದು.
ಮಾಲ್ಯಾಧಾರಿತ ಶಿಕ್ಷಣದ ಜೊತೆಗೆ ಸಮಾಜಸೇವೆ, ವೈದ್ಯಕೀಯ ನೆರವು, ಸೇನಾ ನೆರವು
ಮಕ್ಕಳಿಗೆ ಕೇವಲ ಗುಣಮಟ್ಟದ ಶಿಕ್ಷಣ ನೀಡದರೆ ಸಾಲದು, ಇದರ ಜೊತೆಗೆ ಬದುಕು ರೂಪಿಸುವ ಮೌಲ್ಯಾಧಾರಿತ ಶಿಕ್ಷಣದ ಅಗತ್ಯವಿದೆ. ಮಕ್ಕಳು ಪಾಠ ಪ್ರವಚನದ ಜೊತೆಗೆ ಗುರು ಹಿರಿಯರನ್ನು ಗೌರವಿಸುವ ಹಾಗೂ ತಮ್ಮ ಜೀವನಲ್ಲಿ ಉತ್ತಮ ಗುಣಗಳನ್ನು ರೂಢಿಸಿಕೊಳ್ಳುವ ನಿಟ್ಟಿನಲ್ಲಿ ಮೌಲ್ಯಸುಧಾ ಎನ್ನುವ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದ ಕಾರ್ಯಕ್ರಮ ನಿರಂತರವಾಗಿ ಮಾಡಲಾಗುತ್ತದೆ.ಪ್ರತೀ ವರ್ಷ ಕಾಲೇಜು ಸಂಸ್ಥಾಪಕರ ದಿನಾಚರಣೆಯಂದು ಮೆಡಿಕಲ್ ಹಾಗೂ ಇಂಜಿನಿಯರಿAಗ್ ವಿಭಾಗದ ಸಾಧಕ ವಿದ್ಯಾರ್ಥಿಗಳಿಗೆ ಲಕ್ಷಾಂತರ ರೂಪಾಯಿ ವಿದ್ಯಾರ್ಥಿವೇತನ ವಿತರಿಸಲಾಗುತ್ತದೆ.ಬೋರ್ಡ್ ಪರೀಕ್ಷೆಯ 6 ವಿಷಯಗಳ ಪೈಕಿ ಯಾವುದಾದರೂ ಒಂದು ವಿಷಯದಲ್ಲಿ ಶೇ.100 ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡಿ ಗೌರವಿಸಲಾಗುತ್ತಿದೆ. ಕಾರ್ಕಳ ತಾಲೂಕಿನಿಂದ 10 ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಶೇ.97 ಮತ್ತು ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸುವ ಮೂಲಕ ಶಾಲೆಯಲ್ಲಿ ಆಗ್ರಸ್ಥಾನ ಪಡೆದ ವಿದ್ಯಾರ್ಥಿಗಳು, ಸಂಸ್ಥೆಯು ನಡೆಸುವ ಪ್ರವೇಶ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳು, ಕಾರ್ಕಳ ತಾಲೂಕಿನ ಹಳ್ಳಿಗಳ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಪ್ರತಿಭಾನ್ವಿತ ವಿದ್ಯಾರ್ಥಿಗಳು ಮತ್ತು ಸಂಸ್ಥೆಯ ಸಿಬ್ಬಂದಿ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಇದರ ಜೊತೆಗೆ ವೈದ್ಯಕೀಯ ನೆರವು ನೀಡಲಾಗುತ್ತಿದ್ದು, ಅಜೆಕಾರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವಾಹನ ಕೊಡುಗೆ ನೀಡಲಾಗಿದೆ. ಕಾರ್ಕಳದ ರೋಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರತಿಯೊಬ್ಬ ಡಯಾಲಿಸಿಸ್ ರೋಗಿಗೆ ಜ್ಞಾನಸುಧಾ ವತಿಯಿಂದ ರೂ. 300 ರಿಯಾಯಿತಿ ನೀಡಲಾಗುತ್ತಿದೆ ಹಾಗೂ ಇಲ್ಲಿನ ಕಣ್ಣಿನ ವಿಭಾಗಕ್ಕೆ ರೂ 20 ಲಕ್ಷಗಳ ದೇಣಿಗೆ ನೀಡಲಾಗಿದೆ. ಇದಲ್ಲದೇ ಪ್ರತಿ ವರ್ಷ ಆಗಸ್ಟ್ 21ರಂದು ರಕ್ತದಾನ ಶಿಬಿರವನ್ನು ಆಯೋಜಿಸಲಾಗುತ್ತದೆ. ಅನಾಥಾಶ್ರಮಗಳು ಮತ್ತು ವಿಶೇಷ ಚೇತನ ಮಕ್ಕಳ ಶಾಲೆಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಲಾಗುತ್ತಿದೆ.ಇದಲ್ಲದೇ ರಾಷ್ಟ್ರೀಯ ರಕ್ಷಣಾ ನಿಧಿಗೆ ಪ್ರತಿ ವರ್ಷ ದೇಣಿಗೆಯನ್ನು ನೀಡಲಾಗತ್ತಿದೆ.















.
.
.
.
.
.
.
.
.
.
