ಬೆಂಗಳೂರು, ಅ.21: ರಾಜ್ಯದಲ್ಲಿ ಆರೆಸೆಸ್ಸ್ ಕಾರ್ಯಚಟುವಟಿಕೆಗಳಿಗೆ ಶತಾಯತಗಾಯ ನಿರ್ಬಂಧ ಹೇರಬೇಕೆಂದು ಪಣ ತೊಟ್ಟಿದ್ದ ಸಚಿವ ಪ್ರಿಯಾಂಕ್ ಖರ್ಗೆ ಈ ಕುರಿತು ಸಿಎಂ ಸಿದ್ಧರಾಮಯ್ಯನವರಿಗೆ ಪತ್ರ ಬರೆದು ಅದನ್ನು ಜಾರಿಗೊಳಿಸಿ ಅಧಿಕೃತ ಆದೇಶ ಕೂಡ ಜಾರಿಯಾಗಿದೆ. ಆದರೆ ರಾಜ್ಯ ಸರ್ಕಾರದ ಈ ನಿರ್ಧಾರ ಆರೆಸೆಸ್ಸ್ ಎಂಬ ಜೇನುಗೂಡಿಗೆ ಕಲ್ಲು ಎಸೆದಂತಾಗಿದ್ದು, ರಾಜ್ಯಾದ್ಯಂತ ಲಕ್ಷಾಂತರ ಕಾರ್ಯಕರ್ತರು ಕಾಂಗ್ರೆಸ್ ವಿರುದ್ಧ ತಿರುಗಿಬಿದ್ದಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆಯವರ ಪತ್ರದ ಮೇರೆಗೆ ಸಚಿವ ಸಂಪುಟದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಆರೆಸೆಸ್ಸ್ ಚಟುವಟಿಕೆಗಳಿಗೆ ನಿರ್ಬಂಧ ಹೇರಿದ್ದರೂ ಈ ವಿಚಾರವಾಗಿ ಸರ್ಕಾರದ ಬಹುತೇಕ ಸಚಿವರು ಹಾಗೂ ಶಾಸಕರು ಅಂತರ ಕಾಯ್ದುಕೊಂಡಿದ್ದಾರೆ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿದೆ. ಯಾಕೆಂದರೆ ಪ್ರಿಯಾಂಕ್ ಖರ್ಗೆಯವರ ಕ್ಷೇತ್ರವಾದ ಚಿತ್ತಾಪುರ ಹೊರತುಪಡಿಸಿದರೆ ಉಳಿದ ಕಡೆ ಯಾವುದೇ ಗೊಂದಲವಿಲ್ಲದೇ ಆರೆಸೆಸ್ಸ್ ಕಾರ್ಯಚಟುವಟಿಕೆಗಳು ನಡೆಯುತ್ತಿವೆ, ಸಚಿವ ಪ್ರಿಯಾಂಕ್ ಖರ್ಗೆಯವರ ವೈಯುಕ್ತಿಕ ಅಭಿಪ್ರಾಯವನ್ನು ಸರ್ಕಾರದ ಜೊತೆ ಥಳುಕು ಹಾಕಲಾಗಿದೆ ಎಂದು ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಿದೆ ಎಂದು ತಿಳಿದುಬಂದಿದೆ. ಈ ನಡುವೆ ಆರೆಸೆಸ್ಸ್ ಎನ್ನುವ ಬೃಹತ್ ಸಂಘಟನೆಯನ್ನು ಕೆಣಕಿದ ಸಚಿವ ಪ್ರಿಯಾಂಕ್ ಖರ್ಗೆ ಈ ವಿಚಾರದಲ್ಲಿ ಒಬ್ಬಂಟಿಯಾದರೇ ಎನ್ನುವ ಮಾತುಗಳು ಕೇಳಿಬಂದಿದೆ.
ಸರ್ಕಾರದ ನಿರ್ಬಂಧ ಪ್ರಶ್ನಿಸಿ ಈಗಾಗಲೇ ಆರೆಸೆಸ್ಸ್ ಹೈಕೋಟಿನಲ್ಲಿ ಅರ್ಜಿ ಸಲ್ಲಿಸಿದ್ದು, ಈ ಕುರಿತು ಕೋರ್ಟ್ ಅರ್ಜಿ ವಿಚಾರಣೆಗೆ ಕೈಗೆತ್ತಿಕೊಂಡಿದ್ದು, ಪಥ ಸಂಚಲನ ಕಾರ್ಯಕ್ರಮಕ್ಕೆ ಬಹುತೇಕ ಕೋರ್ಟ್ ಅನುಮತಿ ಸಿಗುವ ಸಾಧ್ಯತೆಯಿದೆ ಎನ್ನಲಾಗಿದೆ. ಒಂದುವೇಳೆ ಅನುಮತಿ ಸಿಕ್ಕಿದರೆ ಪ್ರಿಯಾಂಕ್ ಖರ್ಗೆಯವರ ಕ್ಷೇತ್ರವಾದ ಕಲಬುರ್ಗಿಯ ಚಿತ್ತಾಪುರದಲ್ಲಿ ಆರೆಸೆಸ್ಸ್ ಬೃಹತ್ ಸಮಾವೇಶ ನಡೆಸಲು ಪೂರ್ವಸಿದ್ಧತೆ ನಡೆಸುತ್ತಿದೆ. ಒಟ್ಟಿನಲ್ಲಿ ಆರೆಸೆಸ್ಸ್ ನಿರ್ಬಂಧ ಕುರಿತ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಜಟಾಪಟಿ ತಾರಕಕ್ಕೇರಿದ್ದು ಮುಂದೇನು ಎನ್ನುವ ಕುತೂಹಲಕ್ಕೆ ಎಡೆಮಾಡಿದೆ.