ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಇಂದು ಮಹತ್ವದ ದಿನವಾಗಿದ್ದು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸುವಂತೆ ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸಲ್ಲಿಸಿರುವ ರಿಟ್ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಏಕಸದಸ್ಯ ಪೀಠ ನಡೆಸಲಿದೆ.
ಸಿದ್ದರಾಮಯ್ಯ ಪರವಾಗಿ ಹಿರಿಯ ವಕೀಲ ಪ್ರೊ.ರವಿವರ್ಮ ಕುಮಾರ್ ಮತ್ತು ಮನು ಸಿಂಘ್ವಿ, ರಾಜ್ಯ ಸರ್ಕಾರದ ಪರವಾಗಿ ಕಪಿಲ್ ಸಿಬಲ್, ಎಜಿ ಶಶಿಕಿರಣ್ ಶೆಟ್ಟಿ ಮತ್ತು ಹಿಂದಿನ ಭೂ ಮಾಲೀಕ ದೇವರಾಜು ಪರ ದುಷ್ಯಂತ್ ದವೆ ಅವರು ನ್ಯಾ.ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠದ ಮುಂದೆ ವಾದಿಸಲಿದ್ದಾರೆ. ಸ್ನೇಹಮಯಿ ಕೃಷ್ಣ ಪರವಾಗಿ ಕೆಜಿ ರಾಘವನ್ ವಾದ ಮಂಡಿಸಲಿದ್ದಾರೆ.
ಪ್ರಕರಣದ ಬಗ್ಗೆ ಇಂದು ಅಂತಿಮ ತೀರ್ಪು ಬರುವ ವಿಶ್ವಾಸವಿದೆ. ಸಿಬಿಐಗೆ ವಹಿಸಲು ಅವಶ್ಯಕವಿರುವ ದಾಖಲೆಗಳನ್ನು ನೀಡಲಾಗಿದೆ. ನನಗೆ ಆಮಿಷವೊಡ್ಡಲಾಗಿದೆ, ಒತ್ತಡ, ಬೆದರಿಕೆ ಕೂಡ ಹಾಕಲಾಗಿದೆ. ಈ ಎಲ್ಲಾ ವಿಚಾರಗಳನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದೇವೆ. ಸಿಬಿಐ ತನಿಖೆಯಿಂದ ಮಾತ್ರ ನ್ಯಾಯ ಸಿಗುವ ವಿಶ್ವಾಸವಿದೆ. ಗುರಿ ತಲುಪುವವರೆಗೂ ನನ್ನ ಹೋರಾಟ ಮುಂದುವರಿಯುತ್ತದೆ ಎಂದರು.